
ಬೆಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಮೂವರನ್ನು ಖುಲಾಸೆಗೊಳಿಸಿದ್ದ ಹಾವೇರಿಯ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ| ಜಿ. ಬಸವರಾಜ್ ಅವರಿದ್ದ ಏಕ ಸದಸ್ಯ ಪೀಠವು “ಎಲ್ಲಾದರೂ ಹೋಗಿ ಸಾಯಿ” ಎಂದು ಹೇಳುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತೆ ಆಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಹಾವೇರಿ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.
ಈ ಪ್ರಕರಣದಲ್ಲಿ ಆರೋಪಿಗಳು ಮೃತರನ್ನು “ಎಲ್ಲಾದರೂ ಹೋಗಿ ಸಾಯಿರಿ” ಎಂದು ಹೇಳಿರುವುದು ಪ್ರಾಸಿಕ್ಯೂಷನ್ ನ ವಾದವಾಗಿದ್ದು ಈ ವಾದವನ್ನು ಒಪ್ಪಿಕೊಂಡರೂ ಆರೋಪಿಗಳು ಆಡಿದ ಮಾತು ಪ್ರಚೋದನೆ ಎಂದು ಹೇಳಲಾಗದು. ಜಗಳ ಅಥವಾ ಸಿಟ್ಟಿನಲ್ಲಿ ಹೇಳಿದ ಮಾತುಗಳನ್ನು ಪ್ರಚೋದನೆ ಎಂದು ಪರಿಗಣಿಸಲಾಗುವುದಿಲ್ಲ ಆರೋಪಿಗಳ ಮಾತುಗಳಲ್ಲಿ ಅಪರಾಧಿಕ ಮನಸ್ಸು ಅಥವಾ ಉದ್ದೇಶ ಇಲ್ಲ ಎಂದು ಹೇಳಿ ನ್ಯಾಯಪೀಠವು ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ವಜಗೊಳಿಸಿತು.
ಪ್ರಕರಣದ ಹಿನ್ನೆಲೆ:
ಮೃತರಾದ ಸುಧಾ, ಅವರ ಪತಿ ನಾಗರಾಜು ಹಾಗೂ ಪ್ರಕರಣದ ಆರೋಪಿಗಳಾದ ರಾಮಪ್ಪ, ಅವರ ಪುತ್ರ ಸುರೇಶ್ ಮತ್ತು ಸೊಸೆ ಸ್ವರೂಪವ್ವ ಒಂದೇ ಮನೆಯಲ್ಲಿ ವಾಸಿಸುತ್ತಿದ್ದು ನಾಗರಾಜ್ ಅವರ ಅಜ್ಜ ರಾಮಪ್ಪ ತನ್ನ ಮನೆಯನ್ನು ಖಾಲಿ ಮಾಡುವಂತೆ ಸುಧಾ ಗೆ ಹೇಳಿದ್ದರು. ಈ ವೇಳೆ ಸುಧಾ ತಾನು ಎಲ್ಲಿಗೆ ಹೋಗಬೇಕು ಎಂದು ಕೇಳಿದಾಗ “ಎಲ್ಲಾದರೂ ಹೋಗಿ ಸಾಯಿ” ಎಂಬುದಾಗಿ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ. ಈ ಘಟನೆ ನಡೆದ ಅರ್ಧ ಗಂಟೆ ಬಳಿಕ ಸುಧಾ ಸೀಮೆ ಎಣ್ಣೆ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಕುರಿತು ಹಿರೇಕೆರೂರು ಠಾಣೆ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ದೂರು ದಾಖಲಿಸಿಕೊಂಡಿದ್ದು ಇದನ್ನು ವಿಚಾರಣಾ ನ್ಯಾಯಾಲಯವು ವಜಾಗೊಳಿಸಿತ್ತು.