
ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆ ದೇಶದಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿದೆ ಎಂಬ ಸುದ್ದಿಗಳ ನಡುವೆ, 14.2 ಕೆಜಿ ಸಿಲಿಂಡರ್‌ನಲ್ಲಿ ಕೇವಲ 10 ಕೆಜಿ ಗ್ಯಾಸ್ ಪೂರೈಸುವ ಕುರಿತು ಚಿಂತನೆ ನಡೆದಿದೆ ಎಂಬ ವರದಿಗಳನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಇವು ಕೇವಲ ವದಂತಿಗಳು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.
ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಮಾತನಾಡಿ, “ಇಂತಹ ಊಹಾಪೋಹಗಳಿಗೆ ಯಾವುದೇ ಆಧಾರ ಇಲ್ಲ. ಜನರು ಸುಳ್ಳು ಸುದ್ದಿಗಳನ್ನು ನಂಬಬಾರದು” ಎಂದು ಮನವಿ ಮಾಡಿದ್ದಾರೆ.
ಇದರ ನಡುವೆ, ದೇಶದ ತೈಲ ಸಂಗ್ರಹ ಸ್ಥಿತಿ ಸಮರ್ಪಕವಾಗಿದ್ದು, ಒಟ್ಟು ಸಾಮರ್ಥ್ಯದ ಸುಮಾರು 64% ಮಟ್ಟದಲ್ಲಿ ಕಚ್ಚಾ ತೈಲ ಲಭ್ಯವಿದೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಮಂಗಳೂರು, ಪಾದೂರು ಮತ್ತು ವಿಶಾಖಪಟ್ಟಣಂ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ತೈಲ ಸಂಗ್ರಹ ವ್ಯವಸ್ಥೆ ಮಾಡಲಾಗಿದೆ.
ಎಲ್‌ಪಿಜಿ ಒತ್ತಡದ ಹಿನ್ನೆಲೆ ಪಿಎನ್‌ಜಿ ಬಳಕೆಯನ್ನು ಉತ್ತೇಜಿಸಲಾಗುತ್ತಿದ್ದು, ಕಳೆದ ಮೂರು ವಾರಗಳಲ್ಲಿ ಸುಮಾರು 3.5 ಲಕ್ಷ ಹೊಸ ಸಂಪರ್ಕಗಳನ್ನು ನೀಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಿಲಿಂಡರ್ ಕೊರತೆ ಇಲ್ಲ ಎಂದು ಸರ್ಕಾರ ತಿಳಿಸಿದೆ.






















































