
ಮುಂಬೈ: ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂದೇ ಖ್ಯಾತಿ ಪಡೆದಿದ್ದ, ಕನ್ನಡಿಗ ಮುಂಬೈನ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ದಯಾ ನಾಯಕ್ ಎರಡು ದಿನದ ಹಿಂದಷ್ಟೇ ಎಸಿಪಿ ಹುದ್ದೆಗೆ ಭಡ್ತಿ ಪಡೆದಿದ್ದು ಇದೀಗ ಇಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ ಎಂದು ವರದಿಯಾಗಿದೆ.
ದಯಾ ನಾಯಕ್ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆಯವರು. ಮುಂಬೈಗೆ ಸ್ಥಳಾಂತರವಾಗಿದ್ದ ಅವರು 1995ರಲ್ಲಿ ಮಹಾರಾಷ್ಟ್ರದ ಜುಹು ಪೊಲೀಸ್ ಠಾಣೆಯಲ್ಲಿ ತಮ್ಮ ಜೀವನ ಆರಂಭಿಸಿದರು. ಅಲ್ಲಿಂದ ಸುದೀರ್ಘ ಮೂರು ದಶಕಗಳ ಕಾಲ ಸಬ್ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದ ಅವರು ಗುರುವಾರ ನಿವೃತ್ತರಾಗಲಿದ್ದಾರೆ. ಖಡಕ್ ಅಧಿಕಾರಿಯಾಗಿದ್ದ ಇವರು ಗ್ಯಾಂಗ್‌ಸ್ಟರ್‌ಗಳ ಶೂಟೌಟ್ ಮೂಲಕ ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಗಳಿಸಿದ್ದರು.
ನಿವೃತ್ತಿ ಕುರಿತು ಜಾಲತಾಣದಲ್ಲಿ ಬರೆದುಕೊಂಡಿರುವ ದಯಾ ನಾಯಕ್, ‘ಮೊದಲ ಬಾರಿಗೆ ಎಸಿಪಿ ಸಮವಸ್ತ್ರ ಧರಿಸುತ್ತಿದ್ದೇನೆ. ಶಾಶ್ವತವಾಗಿ ಅದನ್ನು ನೇತುಹಾಕುವ ಒಂದು ದಿನದ ಮೊದಲು. ಇದು ಕೊನೆಯಲ್ಲಿ ಬಂದಿರಬಹುದು. ಇದು ಬಡ್ತಿ ಮಾತ್ರವಲ್ಲದೇ ಜೀವಿತಾವಧಿಯ ಕರ್ತವ್ಯ, ಶಿಸ್ತು ಮತ್ತು ಸಮರ್ಪಣೆ ಗುರುತಿಸುವ ಗೌರವ’ ಎಂದಿದ್ದಾರೆ.