
ಉಳ್ಳಾಲ: ಶುಕ್ರವಾರ ಉಳ್ಳಲಾದ ಮಂಜನಾಡಿ ಗ್ರಾಮದ ಉರುಮನೆ ಮದಪಾಡಿಯಲ್ಲಿ ಮುಂಜಾನೆ 4 ಗಂಟೆ ವೇಳೆ ಮನೆಯೊಂದರ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದ ಪರಿಣಾಮ ಮಹಿಳೆ ಮತ್ತು ಮಗು ಅಸುನೀಗಿದ್ದು ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ.
ತೋಟದ ನಡುವಿರುವ ಮನೆಯ ಮೇಲೆ ಬೃಹತ್ ಮರ ಸಹಿತ ಸುಮಾರು 30 ಅಡಿ ಧರೆ ಕುಸಿದು ಬಿದ್ದಿದ್ದು ಮೃತಪಟ್ಟವರನ್ನು ಪ್ರೇಮ (54) ಮತ್ತು ಮೊಮ್ಮಗ ಆರ್ಯನ್ ಎಂದು ಗುರುತಿಸಲಾಗಿದೆ.
ಘಟನೆ ನಡೆದ ವೇಳೆ ಮನೆಯ ಯಜಮಾನ ಕಾಂತಪ್ಪ ಪೂಜಾರಿ, ಅವರ ಪತ್ನಿ ಪ್ರೇಮ, ಪುತ್ರ ಸೀತಾರಾಮ ಮತ್ತು ಸೊಸೆ ಅಶ್ವಿನಿ ಹಾಗೂ ಮೊಮ್ಮಕ್ಕಳಾದ ಆರ್ಯನ್ ಮಲಗಿದ್ದು ಸೀತಾರಾಮ ಅವರು ಮನೆಯಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರೇಮ ಅವರು ಸ್ಥಳದಲ್ಲಿಯೇ ಅಸುನೂಗಿದ್ದು ಮೃತ ದೇಹವು ಮಣ್ಣಿನಡಿಯಲ್ಲಿಯೇ ಸಿಲುಕಿಕೊಂಡಿದೆ.
ಕಾಂತಪ್ಪ ಪೂಜಾರಿ ಅವರನ್ನು ರಕ್ಷಿಸಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಶ್ವಿನಿ ಮತ್ತು ಆರುಷ್ ಅವಶೇಷಗಳಡಿಯಲ್ಲಿ ಸಿಲುಕಿದ್ದು ಸ್ಥಳಕ್ಕೆ NDRF, SDRF ತಂಡಗಳು ಆಗಮಿಸಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ.






















































