
ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಕಾರ್ಕಳದ ಮಹತ್ವದ ಎಣ್ಣೆಹೊಳೆ ಏತ ನೀರಾವರಿ ಯೋಜನೆಗೆ ಕಾಂಗ್ರೆಸ್ ನಾಯಕ ಶ್ರೀ ಉದಯ ಶೆಟ್ಟಿ ಮುನಿಯಾಲು ಅವರ ಸತತ ಪ್ರಯತ್ನದ ಫಲವಾಗಿ ಇಂದು ಬೆಳಿಗ್ಗೆಯಿಂದ ವಿದ್ಯುತ್ ಸಂಪರ್ಕ ಮರುಸ್ಥಾಪನೆಯಾಗಿದ್ದು, ನೀರು ಹರಿಸುವ ಪ್ರಕ್ರಿಯೆ ಯಶಸ್ವಿಯಾಗಿ ಪುನಾರಂಭಗೊಂಡಿದೆ.
ಯೋಜನೆಯ ವಿದ್ಯುತ್ ಸಂಪರ್ಕ ಕಡಿತಗೊಂಡು ರೈತರು ಆತಂಕಕ್ಕೀಡಾಗಿದ್ದನ್ನು ಗಮನಿಸಿದ ಉದಯ ಶೆಟ್ಟಿ ಮುನಿಯಾಲು ಅವರು ಕೂಡಲೇ ಕಾರ್ಯಪ್ರವೃತ್ತರಾಗಿದ್ದರು. ಉಪಮುಖ್ಯಮಂತ್ರಿ ಹಾಗೂ ಬೃಹತ್ ನೀರಾವರಿ ಸಚಿವರಾಗಿರುವ ಶ್ರೀ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್,ವಿಧಾನ ಪರಿಷತ್ ಸದಸ್ಯರು ಹಾಗೂ ಮೆಸ್ಕಾಂ (KEB) ಅಧ್ಯಕ್ಷರಾದ ಹರೀಶ್ ಕುಮಾರ್, ಹಾಗೂ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಗಂಭೀರತೆಯನ್ನು ಅರಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ, ಮೆಸ್ಕಾಂ ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್ ಅವರು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ಕೆ.ಇ.ಬಿ (MESCOM) ಇಲಾಖೆಯ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. ನಾಯಕರ ಈ ಸಮನ್ವಯದ ಫಲವಾಗಿ ಇಂದು ಬೆಳಿಗ್ಗೆಯಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಇಂದು ಬೆಳಿಗ್ಗೆಯಿಂದ ಆಣೆಕಟ್ಟು ಮೋಟಾರ್ಗಳು ಕಾರ್ಯಾರಂಭ ಮಾಡಿದ್ದು, ನದಿಯಿಂದ ನೀರನ್ನು ಎತ್ತಿ ಕೆರೆಗಳಿಗೆ ಹರಿಸಲಾಗುತ್ತಿದೆ. ಬೇಸಿಗೆಯ ಆರಂಭದಲ್ಲಿ ಕೃಷಿ ಭೂಮಿಗೆ ನೀರು ಲಭ್ಯವಾಗಿರುವುದು ಈ ಭಾಗದ ರೈತರಲ್ಲಿ ಸಂತಸ ತಂದಿದೆ. ”ಎಣ್ಣೆಹೊಳೆ ಯೋಜನೆ ಸ್ಥಗಿತಗೊಂಡ ಮಾಹಿತಿ ಬಂದ ತಕ್ಷಣ ನಾವು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿದೆವು. ವಿಶೇಷವಾಗಿ ಉಪಮುಖ್ಯಮಂತ್ರಿಗಳು ಹಾಗೂ ಮೆಸ್ಕಾಂ ಅಧ್ಯಕ್ಷರಾದ ಹರೀಶ್ ಕುಮಾರ್ ಅವರು ಈ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಪರಿಹಾರ ಒದಗಿಸಿದ್ದಾರೆ. ರೈತರ ಹಿತ ಕಾಪಾಡುವುದು ನಮ್ಮ ಮೊದಲ ಆದ್ಯತೆ.ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಸಮಸ್ಯೆ ಪರಿಹರಿಸುವುದನ್ನು ಬಿಟ್ಟು ಪ್ರತಿಭಟನೆ ನಡೆಸುವುದು ಅವರ ಕೆಲಸದ ಮೇಲಿನ ಇಚ್ಚಾಶಕ್ತಿಯ ಕೊರತೆಯತ್ತ ಬೊಟ್ಟು ಮಾಡುತ್ತಿದೆ. ರಾಜಕೀಯ ಮಾಡುವುದಾದರೆ ಅವರ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಕೇವಲ ರಾಜಕೀಯ ಮಾಡುತ್ತಿರಲಿ ಎಂದು ಉದಯ ಕುಮಾರ್ ಶೆಟ್ಟಿ ಹೇಳಿದ್ದಾರೆ.






