
ಡೆಹ್ರಾಡೂನ್: ಆ.5ರಂದು ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಹಠಾತ್ ಪ್ರವಾಹ ಸೃಷ್ಠಿಯಾಗಿ ನೋಡನೋಡುತ್ತಿದ್ದಂತೆ ನದಿಯಲ್ಲಿ ರೌದ್ರಾವತಾರ ತಾಳಿ ಹರಿದುಬಂದ ಹೂಳು ತುಂಬಿಕೊಂಡ ಪರಿಣಾಮ ನೀರಿನಿಂದ 25ಕ್ಕೂ ಹೆಚ್ಚು ಹೋಟೆಲ್, ಹೋಂ ಸ್ಟೇಗಳು ಕೊಚ್ಚಿ ಹೋಗಿದ್ದು ಘಟನೆಯಲ್ಲಿ 10ಕ್ಕೂ ಅಧಿಕ ಮಂದಿ ಮೃತಪಟ್ಟರೇ 8-10 ಸೈನಿಕರು ಸೇರಿ ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಭೂಕುಸಿತದ ನಡುವೆ ಭಾರೀ ಮಳೆ ಮುಂದುವರಿದ ಕಾರಣ ಭಾರತೀಯ ಹವಾಮಾನ ಇಲಾಖೆ ಇಂದು ಹರಿದ್ವಾರ, ನೈನಿತಾಲ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಜೆಸಿಬಿ ಯಂತ್ರಗಳ ಸಹಾಯದಿಂದ ರಸ್ತೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ರಾಜ್ಯದ ಇತರ ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು ಅಲ್ಲದೇ ಉತ್ತರಾಖಂಡ ಸರ್ಕಾರವು ಡೆಹ್ರಾಡೂನ್, ನೈನಿತಾಲ್, ತೆಹ್ರಿ, ಚಮೋಲಿ, ರುದ್ರಪ್ರಯಾಗ, ಚಂಪಾವತ್, ಪೌರಿ, ಅಲ್ಮೋರಾ ಮತ್ತು ಬಾಗೇಶ್ವರ್ ಒಂಬತ್ತು ಜಿಲ್ಲೆಗಳಲ್ಲಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿದೆ.
ಘಟನೆ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಭಾರತೀಯ ಸೇನೆಯ ಐಬೆಕ್ಸ್ ಬ್ರಿಗೇಡ್‌ನೊಂದಿಗೆ ರಕ್ಷಣಾ ಕಾರ್ಯಾಚರಣೆಗಳು ನಡೆಸುತ್ತಿದ್ದು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರ ರಕ್ಷಣೆ ಮಾಡಲಾಗುತ್ತಿದೆ. ಆದ್ರೆ ದೊಡ್ಡ ಪ್ರಮಾಣದ ಹೂಳು ತುಂಬಿದ ಹಿನ್ನಲೆ ರಕ್ಷಣೆಗೆ ಸಮಸ್ಯೆಯಾಗುತ್ತಿದೆ. ಈ ರಕ್ಷಣೆಗೆ ಅನುಕೂಲವಾಗಲು ಮೂರು ಹೆಲಿಕ್ಯಾಪ್ಟರ್‌ಗಳನ್ನ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.
ಗಾಯಾಳುಗಳಿಗೆ ಹರ್ಷಿಲ್‌ನಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಉತ್ತರಕಾಶಿಯ ಮೇಘಸ್ಫೋಟದಲ್ಲಿ, ಸೈನಿಕರ ನಷ್ಟಗಳ ಹೊರತಾಗಿಯೂ, ಬಾಕಿ ಉಳಿದ ಸೇನಾ ಸಿಬ್ಬಂದಿ ಪರಿಹಾರ ಕಾರ್ಯಾಚರಣೆ ಮುನ್ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.