ಭವ್ಯ ಸ್ವಾಗತಕ್ಕೆ ಸಜ್ಜಾದ ಕೃಷ್ಣನಗರಿ

ಉಡುಪಿ : ಇಂದು ಶ್ರೀ ಕೃಷ್ಣ ಮಠದಲ್ಲಿ ನಡೆಯುವ ‘ಲಕ್ಷ ಕಂಠ ಗೀತಾ ಪಾರಾಯಣ’ದಲ್ಲಿ ಪಾಲ್ಗೊಳ್ಳಲು ಪ್ರಧಾನಿಯಾಗಿ ನರೇಂದ್ರ ಮೋದಿಯವರು ಪ್ರಥಮ ಬಾರಿಗೆ ಉಡುಪಿಯ ಶ್ರೀಕೃಷ್ಣಮಠಕ್ಕೆ ಭೇಟಿ ನೀಡುತ್ತಿದ್ದು, ಅವರ ಭವ್ಯ ಸ್ವಾಗತಕ್ಕೆ ಕೃಷ್ಣನಗರಿ ಸಕಲ ಸಿದ್ಧತೆ ನಡೆಸಿದೆ.
1 ಕಿ.ಮೀ. ಭರ್ಜರಿ ರೋಡ್ ಶೋ ಮೂಲಕ ರಥಬೀದಿಗೆ ಆಗಮಿಸಲಿರುವ ಮೋದಿ, ಬಳಿಕ ಕೃಷ್ಣಮಠದಲ್ಲಿ ಸುವರ್ಣ ಕನಕನ ಕಿಂಡಿ ಉದ್ಘಾಟಿಸಿ, ಕೃಷ್ಣನ ದರ್ಶನ ಪಡೆಯಲಿದ್ದಾರೆ. ಬಳಿಕ, ಪುತ್ತಿಗೆ ಮಠದಲ್ಲಿ ಸುವರ್ಣ ತೀರ್ಥ ಮಂಟಪ ಕೃಷ್ಣಾರ್ಪಣೆಗೊಳಿಸಿ, ಪರ್ಯಾಯ ಮದುಪೇಂದ್ರ ತೀರ್ಥ ಸಂಸ್ಥಾನ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಆಯೋಜಿಸಿರುವ ‘ಲಕ್ಷ ಕಂಠ ಗೀತಾ ಪಾರಾಯಣ’ದಲ್ಲಿ ಪಾಲ್ಗೊಂಡು ಭಗವದ್ಗೀತೆಯ 10 ಶ್ಲೋಕಗಳನ್ನು ಸ್ವತಃ ಪಠಣ ಮಾಡಲಿದ್ದಾರೆ. ನಂತರ, ನಡೆಯುವ ಸಮಾರಂಭದಲ್ಲಿ ಗೀತಾ ಸಂದೇಶ ನೀಡಲಿದ್ದಾರೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು ಇಡೀ ಉಡುಪಿ ಕೇಸರಿಮಯದಿಂದ ಕಂಗೊಳಿಸುತ್ತಿದೆ.






















































