
ಉಡುಪಿ: ಕಲ್ಸಂಕ ವೃತ್ತದ ಬಳಿ ಮೈಮೇಲೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಯತ್ನಿಸಿದ ವ್ಯಕ್ತಿಯೋರ್ವನನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಮತ್ತು ನಗರ ಪೊಲೀಸರು ರಕ್ಷಿಸಿರುವ ಘಟನೆ ವರದಿಯಾಗಿದೆ.
ಭಾನುವಾರ ಫೆ. 22ರ ಸಂಜೆ, ಬಾಟಲಿಯಲ್ಲಿ ಪೆಟ್ರೋಲ್ ಹಿಡಿದುಕೊಂಡು, ಕಲ್ಸಂಕ ವೃತ್ತದ ಬಳಿ ಕಿರುಚಾಡುತ್ತಾ ಮೈಮೇಲೆ ಪೆಟ್ರೋಲ್ ಸುಳಿದುಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ತಡೆದಿದ್ದು, ಆತ ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾನೆ. ಪೊಲೀಸರು ಒಮ್ಮೆ ಆತನಿಂದ ಪೆಟ್ರೋಲ್ ಬಾಟಲಿ ಕಸಿದುಕೊಂಡಿದ್ದು, ಆತ ಮತ್ತೊಮ್ಮೆ ಪೆಟ್ರೋಲ್ ತಂದು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದ್ದಾನೆ. ತಕ್ಷಣವೇ ನಗರ ಪೊಲೀಸರು ಮತ್ತು ಸಮಾಜಸೇವಕ ನಿತ್ಯಾನಂದ ಒಳಕಾಡು ಆತನನ್ನು ತಡೆದಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಗದಗ ಮೂಲದವನಾಗಿದ್ದು, ಆತನನ್ನು ಊರಿಗೆ ರವಾನಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ.



