
ಉಡುಪಿ: ನಾಡಹಬ್ಬ ಕೃಷ್ಣ ಮಠದ ಪರ್ಯಾಯ ಹಿನ್ನೆಲೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸುಮಾರು 6 ಕೋಟಿ ರೂಗಳ ವೆಚ್ಚದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ಈ ಕುರಿತು ಜಿಲ್ಲೆಯ ಶಾಸಕರಾದ ಸುನಿಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳಿ, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹಾಗೂ ಇತರ ಅಧಿಕಾರಿಗಳ ಜೊತೆ ವೀಡಿಯೋ ಸಂವಾದ ನಡೆಸಿದ ಸಚಿವರು ಪರ್ಯಾಯ ಸುಗಮವಾಗಿ ಸಾಗಲು ರಸ್ತೆ ಅಭಿವೃದ್ಧಿ ಸೇರಿದಂತೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡಬೇಕು. ಸಮಯವಕಾಶ ಕಡಿಮೆ ಇರುವುದರಿಂದ ಹಗಲು-ರಾತ್ರಿ ಕೆಲಸ ಮಾಡಿ ಜಿಲ್ಲೆಯ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.






