
ಉಡುಪಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಜುಲೈ 17ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಆಧಾರ್ ಮಾನಿಟರಿಂಗ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ್ದು ಈ ವೇಳೆ ಪ್ರತಿಯೊಬ್ಬರು ಆಧಾರ್ ಕಾರ್ಡ್ ಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ 14,11,209 ಜನರು ಆಧಾರ್ ಕಾರ್ಡನ್ನು ಹೊಂದಿದ್ದು ಅವರಲ್ಲಿ 13,42,275 ಮಂದಿ ಮಾತ್ರ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡಿದ್ದಾರೆ. ಬಾಕಿ ಉಳಿದವರು ತಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆಯನ್ನು ಶೀಘ್ರದಲ್ಲಿ ಅಪ್ಡೇಟ್ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದಲ್ಲದೆ ಜಿಲ್ಲೆಯಲ್ಲಿರುವ 15 ವರ್ಷ ಮೇಲ್ಪಟ್ಟ ಆಧಾರ್ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳು ಆಧಾರ್ ಸೆಂಟರ್ ಗೆ ತೆರಳಿ ತಮ್ಮ ಬೆರಳಚ್ಚು ನೀಡಿ ಆಧಾರ್ ಕಾರ್ಡ್ ಸಕ್ರಿಯಗೊಳಿಸಬೇಕು. ಇಲ್ಲವಾದಲ್ಲಿ ಕಾರ್ಡ್ ನಿಷ್ಕ್ರಿಯಗೊಳ್ಳಲಿದ್ದು ಜೊತೆಗೆ ಭವಿಷ್ಯದಲ್ಲಿ ಯಾವುದೇ ಪರೀಕ್ಷೆಗಳನ್ನು ತೆಗೆದುಕೊಳ್ಳಲು ತೊಂದರೆಯಾಗುವ ಸಾಧ್ಯತೆ ಇರಲಿದೆ. ಪ್ರಸ್ತುತ 41,115 ಮಂದಿಯ ಬಯೋಮೆಟ್ರಿಕ್ ನೀಡುವುದು ಬಾಕಿ ಉಳಿದಿದ್ದು ಆದ್ದರಿಂದ ಪ್ರತಿಯೊಬ್ಬರೂ ಬಯೋಮೆಟ್ರಿಕ್ ನೀಡಿ ಆಧಾರ ಅಪ್ಡೇಟ್ ಮಾಡಿಕೊಳ್ಳಬೇಕು ಎಂದು ವಿವರಿಸಿದರು.