
ಮಂಗಳೂರು: ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾವೇರಿ ಅವರು ಈಗ ಇರುವ ರಾಷ್ಟ್ರಗೀತೆ ಮೂಲತಃ ಬ್ರಿಟಿಷರ ಸ್ವಾಗತಕ್ಕೆ ರಚಿಸಿದ ಗೀತೆ ಎಂದು ಹೇಳಿದ್ದು ಈ ಕುರಿತು ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಇಂತಹ ದೇಶದ್ರೋಹದ ಹೇಳಿಕೆ ನೀಡಿದ ಅವರ ವಿರುದ್ಧ ಕೇಸು ದಾಖಲಿಸಬೇಕು, ಬಿಜೆಪಿಯವರು ರಾಷ್ಟ್ರಗೀತೆ ಹಾಗೂ ನೊಬೆಲ್ ಪುರಸ್ಕೃತ ರವೀಂದ್ರನಾಥ ಠಾಗೂರ್ ಅವರಿಗೆ ಅವಮಾನ ಮಾಡುತ್ತಿದ್ದಾರೆ. ಮಹಾತ್ಮ ಗಾಂಧಿ ಕೊಂದಾಯಿತು, ರಾಷ್ಟ್ರದ ಸಂಸ್ಕೃತಿ ಬಿಂಬಿಸಿದ ಠಾಗೂರ್ ಮೇಲೆ ದಾಳಿ ಮಾಡುತ್ತಿದ್ದಾರೆ. ಇದನ್ನು ನೋಡಿದಾಗ ಇವರು ದೋಷದ್ರೋಹಿಗಳು ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಇನ್ನು ಆರೆಸ್ಸೆಸ್ ನಿಷೇಧ ಕುರಿತು ಪ್ರತಿಕ್ರಿಯಿಸಿ ಆರೆಸ್ಸೆಸ್ ಏನು ಅನ್ನೋದು ಕೇರಳದಲ್ಲಿ ಗೊತ್ತಾಗಿದೆ. ಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ. ಕಾಶ್ಮೀರದ ಕಥುವಾದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಆ ಪ್ರಕರಣದ ಆರೋಪಿಯ ಪರ ಬಿಜೆಪಿ ಮಂತ್ರಿಗಳು ನಿಂತಿದ್ದರು. ಆರೆಸ್ಸೆಸ್‌ನಿಂದ ನಾವು ಕಲಿಯಬೇಕಾದ್ದು ಏನೂ ಇಲ್ಲ. 5 ಸಾವಿರ ವರ್ಷಗಳ ಇತಿಹಾಸ ಇರುವ ಸನಾತನ ಧರ್ಮಕ್ಕೆ ಆರೆಸ್ಸೆಸ್‌ನಿಂದ ಅಪಾಯವಿದೆ. ಈ ಹಿಂದೆ ತಾಲಿಬಾನ್ ವಿರೋಧಿಸಿದವರು ಈಗ ಅವರನ್ನೇ ಆಹ್ವಾನಿಸಿ ಅವರಿಗೆ ಇನ್ನೂರು ಕೋಟಿ ಸಹಾಯಧನ ಕೊಡುತ್ತಿದ್ದಾರೆ. ನಾವೆಲ್ಲಾ ಆ ಥರ ಮಾಡಲು ಆಗಲ್ಲ. ನಾವು ಜಾತ್ಯಾತೀತ ತತ್ವದಲ್ಲಿ, ಬಹುತ್ವ ಹಾಗೂ ಸಂವಿಧಾನದಲ್ಲಿ ನಂಬಿಕೆ ಇಟ್ಟವರು ಎಂದು ವಾಗ್ದಾಳಿ ನಡೆಸಿದ್ದಾರೆ.






