
ಹೆಬ್ರಿ :ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳು ಅತಿ ಅವಶ್ಯಕ. ದೈಹಿಕ ಕಸರತ್ತುಗಳು ದೇಹಕ್ಕೆ ಲವಲವಿಕೆಯನ್ನು,ಉತ್ಸಾಹವನ್ನು ತುಂಬುತ್ತದೆ. ದೇಹದ ರಕ್ತ ಪರಿಚಲನೆ ಸರಾಗವಾಗಿ ಸಾಗಿ ನಾವೆಲ್ಲರೂ ಕ್ರಿಯಾಶೀಲರಾಗಿರಲು ಆಟೋಟಗಳಲ್ಲಿ ಪಾಲ್ಗೊಂಡಾಗ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ಬಲ್ಲಾಡಿಯ ಈಶ್ವರನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಟನೆ ಗ್ರಾಮ ಮಟ್ಟದಲ್ಲಿ ಮಾತ್ರವಲ್ಲದೆ ತಾಲೂಕು, ಜಿಲ್ಲಾ ಮಟ್ಟದ ವಿವಿಧ ಪಂದ್ಯಾಟವನ್ನು ಆಯೋಜಿಸುವ ಮೂಲಕ ಸಮಾಜದ ಕ್ರೀಡಾಪಟುಗಳಿಗೆ ನಿರಂತರ ಅವಕಾಶವನ್ನು ನೀಡುತ್ತಿರುವುದು ಶ್ಲಾಘನೀಯವಾದುದು. ಅಲ್ಲದೆ ಕೇವಲ ಕ್ರೀಡೆಗೆ ಮಾತ್ರವಲ್ಲದೆ ಕಲೆ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿರುವ ಪ್ರತಿಭಾವಂತರನ್ನು ಗುರುತಿಸುವ ಮೂಲಕ ಸಮಾಜಮುಖಿ ಚಟುವಟಿಕೆಗಳನ್ನು ಮಾಡುತ್ತಾ ಎಲ್ಲರಿಗೂ ಮಾದರಿಯಾಗಿ ಸಮಾಜದ ಪ್ರಗತಿಯಲ್ಲಿ ಮುಂಚೂಣಿಯಲ್ಲಿದೆ ಎಂದು ಸಾಧಕ ಶಿಕ್ಷಕರಾದ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.
ಅವರು ಮುದ್ರಾಡಿ ಹಳೇಬೀಡು ಬರ್ಸಬೆಟ್ಟು ಮೈದಾನದಲ್ಲಿ ಬಲ್ಲಾಡಿ ಈಶ್ವರನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಟನೆ ವತಿಯಿಂದ ಮುದ್ರಾಡಿ ಗ್ರಾಮದವರಿಗಾಗಿ ನಡೆದ ಎಂಬ ಟ್ರೋಫಿ 2024 ಕ್ರಿಕೆಟ್ ಪಂದ್ಯಾಟದ ಉದ್ಘಾಟನ ಸಮಾರಂಭದಲ್ಲಿ ಸಂಘಟನೆ ವತಿಯಿಂದ ನಡೆಸಿದ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಈಶ್ವರನಗರ ಬಲ್ಲಾಡಿಯ ಕೊಡುಗೈ ದಾನಿ ಪದ್ಮಾವತಿ ಶೆಟ್ಟಿಗಾರ್ ಉದ್ಘಾಟಿಸಿ ಶುಭ ಹಾರೈಸಿದರು. ಮುದ್ರಾಡಿ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಗಣಪತಿ ಎಂ. ಪಾಲ್ಗೊಂಡು ಮುದ್ರಾಡಿಯಲ್ಲಿರುವ ಎಲ್ಲ ಸಂಘಟನೆಗಳು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜಮುಖಿ ಚಿಂತನೆಯನ್ನು ಬೆಳೆಸಿಕೊಂಡಿರುವುದು ಸಂಘಟನಾ ಶಕ್ತಿಯಿದ್ದಲ್ಲಿ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದರು. ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಅಧ್ಯಕ್ಷ ಸಂತೋಷ್ ಕುಲಾಲ್, ಮದಗ ಫ್ರೆಂಡ್ಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿಗಾರ್, ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುದ್ರಾಡಿ ಪ್ರೌಢಶಾಲೆಯಲ್ಲಿ ಎಸ್. ಎಸ್. ಎಲ್. ಸಿ. ಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದ ಸಾಧಕ ವಿದ್ಯಾರ್ಥಿಗಳಾದ ಭಕ್ರೆ ರೇಷ್ಮಾ ಶೆಟ್ಟಿ ಮತ್ತು ಮಹೇಶ್ ಬಲ್ಲಾಡಿ ಅವರನ್ನು ಅಭಿನಂದಿಸಲಾಯಿತು. ಸಂಘಟನೆಯ ಸದಸ್ಯರಾದ ಬಲ್ಲಾಡಿ ಶ್ರೀನಾಥ ಶೆಟ್ಟಿಗಾರ್ ಸ್ವಾಗತಿಸಿದರು.ಹರಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.