
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ಸಂಬಂಧದ ಬಗ್ಗೆ ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು ಸಂದರ್ಶನವೊಂದರಲ್ಲಿ ‘ಟ್ರಂಪ್ ಅವರು ಮೋದಿ ಅವರೊಂದಿಗೆ ಉತ್ತಮ ವೈಯಕ್ತಿಕ ಸಂಬಂಧ ಹೊಂದಿದ್ದರು, ಆದರೆ ಈಗ ಆ ಸಂಬಂಧ ಮುಗಿದಿದೆ’ ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ .
ಕಳೆದ ಎರಡು ದಶಕಗಳಲ್ಲಿ ಭಾರತ-ಅಮೆರಿಕ ಸಂಬಂಧಗಳು ತೀವ್ರ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಬೋಲ್ಟನ್‌ರ ಈ ಹೇಳಿಕೆ ಬಂದಿದೆ. ಟ್ರಂಪ್‌ರ ಸುಂಕ ನೀತಿ ಮತ್ತು ಭಾರತದ ವಿರುದ್ಧ ಅವರ ಆಡಳಿತದ ನಿರಂತರ ಟೀಕೆಗಳು ಉದ್ವಿಗ್ನತೆಯನ್ನು ಇನ್ನಷ್ಟು ಉಲ್ಬಣಗೊಳಿಸಿವೆ. ಬೋಲ್ಟನ್ ಅವರು, ‘ಟ್ರಂಪ್ ಅಂತರರಾಷ್ಟ್ರೀಯ ಸಂಬಂಧಗಳನ್ನು ವೈಯಕ್ತಿಕ ಸಂಬಂಧಗಳ ಮೂಲಕ ನೋಡುತ್ತಾರೆ. ಉದಾಹರಣೆಗೆ, ಪುಟಿನ್‌ರೊಂದಿಗೆ ಉತ್ತಮ ಸಂಬಂಧ ಇದ್ದರೆ, ಅಮೆರಿಕ-ರಷ್ಯಾ ಸಂಬಂಧವೂ ಉತ್ತಮವಾಗಿರುತ್ತದೆ ಎಂದು ಅವರು ಭಾವಿಸುತ್ತಾರೆ. ಆದರೆ ಅದು ಸತ್ಯವಲ್ಲ’ ಎಂದು ತಿಳಿಸಿದ್ದಾರೆ.
ಶ್ವೇತಭವನದ ನೀತಿಗಳು ಭಾರತ-ಅಮೆರಿಕ ಸಂಬಂಧಗಳನ್ನು ದಶಕಗಳ ಹಿಂದಕ್ಕೆ ತಳ್ಳಿವೆ. ಇದರಿಂದ ಮೋದಿ ಅವರು ರಷ್ಯಾ ಮತ್ತು ಚೀನಾಕ್ಕೆ ಹತ್ತಿರವಾಗಿದ್ದಾರೆ. ಚೀನಾ ತನ್ನನ್ನು ಅಮೆರಿಕಕ್ಕೆ ಪರ್ಯಾಯವಾಗಿ ಪ್ರಸ್ತುತಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.