
ವಿಧಾನಸಭೆ: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇ-ಖಾತಾ ನೀಡುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪಗಳಿಗೆ ಸ್ಪಷ್ಟ ದಾಖಲೆಗಳನ್ನು ನೀಡಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯ ಬಜೆಟ್ ಮೇಲಿನ ಚರ್ಚೆಯ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಜನರು ತಮ್ಮ ಆಸ್ತಿಗಳ ಇ-ಖಾತಾ ಪಡೆಯಲು ಕನಿಷ್ಠ 10 ಸಾವಿರ ರೂ. ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಇ-ಖಾತಾ ವ್ಯವಸ್ಥೆ ಉತ್ತಮ ಆಡಳಿತದ ಭಾಗವಾಗಿದ್ದು, ಬೆಂಗಳೂರಿನಲ್ಲಿ ಸುಮಾರು 10 ಲಕ್ಷ ಹಾಗೂ ರಾಜ್ಯದಾದ್ಯಂತ 1.11 ಕೋಟಿ ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ. ಲಂಚ ಪಡೆಯುತ್ತಿರುವ ಬಗ್ಗೆ ಪಟ್ಟಿ ನೀಡಿದರೆ ಸಂಜೆಯೊಳಗೆ ಅಮಾನತು ಮಾಡುವುದಾಗಿ ಹೇಳಿದರು.
ಈ ವೇಳೆ ಆರ್.ಅಶೋಕ್ ಮಾತನಾಡಿ ನಾನು ಮಾಡುತ್ತಿರುವ ಆರೋಪ ಸುಳ್ಳಾಗಿದ್ದರೆ, ಇ-ಖಾತಾಕ್ಕಾಗಿ ಲಂಚ ಪಡೆಯುತ್ತಿಲ್ಲ ಎಂದಾದರೆ ನನ್ನ ವಿರುದ್ಧ ಹಕ್ಕುಚ್ಯುತಿ ಸೇರಿ ಯಾವುದೇ ಕ್ರಮ ಎದುರಿಸಲು ಸಿದ್ಧನಿದ್ದೇನೆ. ನೀವೇ ಯಾವುದಾದರೂ ಜಾಗ ನಿಗದಿ ಮಾಡಿ ನನ್ನನ್ನು ಕರೆದುಕೊಂಡು ಹೋಗಿ, ಲಂಚ ಪಡೆಯುತ್ತಿರುವ ಬಗ್ಗೆ ಜನರ ಬಳಿ ನಾನು ಹೇಳಿಸುತ್ತೇನೆ ಎಂದು ಹೇಳಿದರು.









