
ಉಡುಪಿ: ಉಡುಪಿ ನಗರ ಠಾಣೆ ಪೊಲೀಸರು ಇಸ್ಲಾಂ ಧರ್ಮದ ಬಗ್ಗೆ ಪ್ರಚೋದನಕಾರಿ ಕಾಮೆಂಟ್ ಮಾಡಿದ ಆರೋಪದಡಿ ಬ್ರಹ್ಮಾವರ ಖಾಸಗಿ ಆಸ್ಪತ್ರೆ ವೈದ್ಯನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಈತ ತನ್ನ ಎಕ್ಸ್ ಖಾತೆಯಲ್ಲಿ ಕೋಮು ಭಾವನೆ ಕೆರಳಿಸುವ ಉದ್ದೇಶದಿಂದ ಸಂದೇಶ ಹಾಕಿದ್ದಾನೆಂದು ಆರೋಪಿಸಲಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ವೈದ್ಯನ ಕಾಮೆಂಟ್ ಸ್ಕ್ರೀನ್ ಶಾಟ್ ವೈರಲ್ ಆಗಿದೆ. ಈ ಕಾಮೆಂಟ್ ಬಗ್ಗೆ ವ್ಯಾಪಕ ಟೀಕೆ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿರುವ ವಿಚಾರ:
ಈ ಜಗತ್ತಿನಲ್ಲಿ ಏನನ್ನಾದರೂ ಇಲ್ಲವಾಗಿಸುವುದಾದರೆ ಅದು ಯಾವುದು ಹೇಳು?’ ಎಂದು ಕೇಳಿದ್ದ ಪ್ರಶ್ನೆಗೆ ವೈದ್ಯ ಡಾ. ಉಪಾಧ್ಯ, ‘ಮುಸ್ಲಿಂ ಸಮುದಾಯ’ ಎಂದು ಕಾಮೆಂಟ್ ಮಾಡಿದ್ದಾನೆ. ಕೋಮುಭಾವನೆ ಕೆರಳಿಸುವ ಉದ್ದೇಶದಿಂದಲೇ ಕಾಮೆಂಟ್ ಮಾಡಿದ್ದಾನೆ. ಕೂಡಲೇ ಬಂಧಿಸುವಂತೆ ಆಗ್ರಹ ಕೇಳಿಬಂದ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ನ ಪೊಲೀಸ್ ಉಪ ನಿರೀಕ್ಷಕ ಅಜ್ಮಲ್ ಇಬ್ರಾಹಿಂ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.








