ಬೆಂಗಳೂರು: ಬಸವ ಜಯಮೃತ್ಯುಂಜಯ ಸ್ವಾಮೀಜಿ ಸೋಮವಾರ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ನಡೆದ ಪಂಚಮಸಾಲಿ 2ಎ ಮೀಸಲಾತಿ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ನಡೆಸಿದ್ದಕ್ಕೆ ಮತ್ತಷ್ಟು ಆಕ್ರೋಶಗೊಂಡಿದ್ದು ನಮ್ಮ ಜನ ಇನ್ನಷ್ಟು ಪುಟಿದೇಳುತ್ತಾರೆ. ಅಲ್ಲದೆ, ಇಷ್ಟು ದಿನ ಶಾಂತಿಯುತ ಹೋರಾಟ ಆಗಿತ್ತು, ಇನ್ಮೇಲೆ ಹಳ್ಳಿ ಹಳ್ಳಿಯಲ್ಲೂ ಕ್ರಾಂತಿಯುತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅನುಮತಿ ಇಲ್ಲದೇ ಲಾಠಿ ಚಾರ್ಜ್ ಆಗಿದ್ದು ಹೇಗೆ? ಹಾಗೆ ಆಗಿದ್ದೇ ನಿಜವಾದರೆ ಕೂಡಲೇ ಆ ಅಧಿಕಾರಿಯನ್ನು ಅಮಾನತು ಮಾಡಿ ಎಂದು ಆಗ್ರಹಿಸಿರುವ ಜಯಮೃತ್ಯುಂಜಯ ಶ್ರೀ ನಿಮ್ಮ ಊರಲ್ಲಿ ರಸ್ತೆ ತಡೆದು ಹೋರಾಟ ಮಾಡಿ ಎಂದು ಎಲ್ಲಾ ಲಿಂಗಾಯತ ಸಮುದಾಯದವರಿಗೆ ಕರೆ ನೀಡಿದ್ದಾರೆ.
ಇತ್ತ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಲಾಠಿ ಚಾರ್ಜ್ ಸಮರ್ಥಿಸಿಕೊಂಡಂತೆ ಮಾತನಾಡಿ, ಗಲಾಟೆ ಮಾಡುವ ಉದ್ದೇಶದಿಂದಲೇ ಹೋರಾಟಗಾರರು ಬಂದಿದ್ದರು ಎಂದು ಹೇಳಿದ್ದಾರೆ.