
ಬೆಂಗಳೂರು: ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಇಸ್ಕಾನ್‌ನ ರುಚಿಕರ ಹಾಗೂ ಆರೋಗ್ಯಕರ ಊಟ ಸಿಗಲಿದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳವಾರ ‘ಪೌಷ್ಟಿಕ ಆಹಾರ’ ಯೋಜನೆಗೆ ಇಂದಿರಾನಗರದಲ್ಲಿರುವ ಸಿ.ವಿ.ರಾಮನ್ ನಗರ ಜನರಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟ ವಿತರಿಸುವ ಮೂಲಕ ಚಾಲನೆ ನೀಡಿದರು.
ಸದ್ಯ ಕೆಸಿ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ಇಸ್ಕಾನ್ ಊಟ ಸಿಗಲಿದ್ದು ಸುಮಾರು 9 ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ 1.37 ಕೋಟಿ ರೂಪಾಯಿ ವೆಚ್ಚವಾಗಲಿದೆ.
ಚಾಲನೆ ನೀಡಿದ ಬಳಿಕ ದಿನೇಶ್ ಗುಂಡೂರಾವ್ ಮಾತನಾಡಿ, ಸಿ.ವಿ.ರಾಮನ್ ನಗರ ಆಸ್ಪತ್ರೆಯಲ್ಲಿ ಕ್ಯಾಥ್ ಲ್ಯಾಬ್ ಆರಂಭ ಮಾಡುವುದಾಗಿ ಘೋಷಣೆ ಮಾಡುತ್ತೇವೆ. ಮಂಗಳೂರು, ಹೋಸಕೋಟೆಯಲ್ಲಿ ಕೂಡ ಕ್ಯಾಥ್ ಲ್ಯಾಬ್ ಓಪನ್ ಮಾಡ್ತೇವೆ. ಮೂರು ಆಸ್ಪತ್ರೆಗಳಲ್ಲಿ ಪ್ರಾಯೋಗಿಕವಾಗಿ ಪೌಷ್ಟಿಕ ಆಹಾರ ವಿತರಣೆ ಮಾಡುತ್ತಿದ್ದು ಇದನ್ನು ಇನ್ನೂ ವಿಸ್ತರಣೆ ಮಾಡುವ ಬಗ್ಗೆ ಚಿಂತನೆ ಆಗ್ತಿದೆ. ಐದು ಥರದ ಪೌಷ್ಟಿಕ ಆಹಾರ ವಿತರಣೆ ಮಾಡ್ತಾ ಇದ್ದೇವೆ. ಬಾಣಂತಿಯರಿಗೆ ಒಂದು ಆಹಾರ ಕ್ರಮ, ಥೆರಪಿಸ್ಟ್ಗಳಿಗೆ ಒಂದು ಮಾದರಿಯ ಆಹಾರ ಕ್ರಮ, ಮಕ್ಕಳಿಗೆ ಒಂದು ರೀತಿಯ ಆಹಾರ ಕ್ರಮ ಜಾರಿ ಆಗ್ತಿದೆ. ನಮ್ಮ ಆಸ್ಪತ್ರೆಯಲ್ಲಿ ಪ್ರಾರಂಭ ಆಗಿರೋದು ನನಗೆ ಬಹಳ ಸಂತೋಷ ಮತ್ತು ತೃಪ್ತಿ ತಂದಿದೆ ಎಂದು ಮಾಹಿತಿ ನೀಡಿದರು.