
ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್‌ನಲ್ಲಿ 12 ವರ್ಷದ ಬಾಲಕಿಯೊಬ್ಬಳು ಬೆಂಗಳೂರಿನಲ್ಲಿ ನಡೆದ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಲಿಕ್ವಿಡ್ ನೈಟ್ರೋಜನ್ ತುಂಬಿದ ಪಾನ್ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದು ವೈದ್ಯರು ಪರಿಶೀಲಿಸಿ ಆಕೆಯ ಹೊಟ್ಟೆಯಲ್ಲಿ ರಂಧ್ರವಾಗಿದ್ದನ್ನು ಪತ್ತೆ ಹಚ್ಚಿದ್ದಾರೆ.
ಬಾಲಕಿಯನ್ನು ಇಂಟ್ರಾಆಪರೇಟಿವ್ OGD ಸ್ಕೋಪಿಯೊಂದಿಗೆ ಪರಿಶೋಧನಾತ್ಮಕ ಲ್ಯಾಪರೊಟಮಿಗೆ ಒಳಪಡಿಸಿ ಅಲ್ಲಿ ಅನ್ನನಾಳ, ಹೊಟ್ಟೆ ಮತ್ತು ಡ್ಯುವೋಡೆನಮ್ ಅನ್ನು ಪರೀಕ್ಷಿಸಲು ಎಂಡೋಸ್ಕೋಪ್ ಬಳಸಲಾಯಿತು. ಈ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಸುಮಾರು 4×5 ಸೆಂ.ಮೀ ಅಳತೆಯ ಅನಾರೋಗ್ಯಕರ ಪ್ಯಾಚ್ ಕಂಡುಬಂದಿದೆ.ಬಳಿಕ ವೈದ್ಯರು ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯ ಒಂದು ಭಾಗವನ್ನು ತೆಗೆದುಹಾಕಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ 2 ದಿನ ಐಸಿಯುನಲ್ಲಿದ್ದ ಬಾಲಕಿ, 6 ದಿನಗಳ ಆಸ್ಪತ್ರೆ ಮೇಲ್ವಿಚಾರಣೆ ಬಳಿಕ ಡಿಸ್ಚಾರ್ಜ್ ಆಗಿದ್ದಾಳೆ.ಈ ಕುರಿತು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಯ ಆಪರೇಟಿಂಗ್ ಸರ್ಜನ್ ಡಾ.ವಿಜಯ್ ಎಚ್.ಎಸ್ ಮಾತನಾಡಿ, ದೇಶದ ವಿವಿಧ ಭಾಗಗಳಿಂದ ಇಂತಹ ಹಲವಾರು ಪ್ರಕರಣಗಳು ವರದಿಯಾಗಿದ್ದು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ.