ಬೆಳ್ಮಣ್ ಜ್ಯೂನಿಯರ್ ಕಾಲೇಜಿನ ಸಭಾಂಗಣದಲ್ಲಿ, ಅಮ್ಮನ ನೆರವು ಪೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನ ಮತ್ತು ಸಹಾಯಧನ ಹಸ್ತಾಂತರ

ಜುಲೈ. 9 ವಿವಿಧ ಚಾರಿಟಿ ಸಂಸ್ಥೆಗಳಿಂದ ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳು ಮುಂದೆ ಅದೇ ರೀತಿಯ ವಿದ್ಯಾರ್ಥಿವೇತನಗಳನ್ನು ಕೊಡುವವರಾಗಬೇಕು. ಕೃತಜ್ಞತೆಯು ಅತೀ ದೊಡ್ಡ ಮೌಲ್ಯವಾಗಿದೆ. ನಮ್ಮ ಶಿಕ್ಷಣಕ್ಕೆ ವಿವಿಧ ವ್ಯಕ್ತಿ ಮತ್ತು ಸಂಸ್ಥೆಗಳಿಂದ ದೊರೆತ ವಿದ್ಯಾರ್ಥಿವೇತನವನ್ನು ಸದುಪಯೋಗ ಪಡಿಸುವುದು ಮಾತ್ರವಲ್ಲ ಅದನ್ನು ನೆನಪಲ್ಲಿ ಇಟ್ಟುಕೊಳ್ಳುವುದು ಮತ್ತು ಮುಂದೆ ನಾವು ಸಂಪಾದನೆ ಆರಂಭಿಸಿದಾಗ ಅದರ ಒಂದು ಭಾಗವನ್ನು ಸಮಾಜಕ್ಕೆ ಹಿಂದಿರುಗಿಸುವುದು ನಮ್ಮೆಲ್ಲರ ಕರ್ತವ್ಯ ಆಗಬೇಕು ಎಂದು ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹೇಳಿದರು.
ಅವರು ಬೆಳ್ಮಣ್ ಜ್ಯೂನಿಯರ್ ಕಾಲೇಜಿನ ಸಭಾಂಗಣದಲ್ಲಿ ಅಮ್ಮನ ನೆರವು ಫೌಂಡೇಶನ್ ವತಿಯಿಂದ ನಡೆದ ವಿದ್ಯಾರ್ಥಿವೇತನ ಮತ್ತು ಸಹಾಯ ಧನ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತಾಡುತ್ತಿದ್ದರು. ಅಮ್ಮನ ನೆರವು ಫೌಂಡೇಶನ್ ಮೂಲಕ ಸರಕಾರಿ ಶಾಲೆಗಳ ಪ್ರತಿಭಾವಂತ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಅಂದಾಜು ಮೂರು ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನಗಳನ್ನು ಹಸ್ತಾಂತರ ಮಾಡಿ ಅವರು ಶುಭಕೋರಿದರು.
ಸಹಕಾರಿ ಧುರೀಣರು ಹಾಗೂ ಬೆಳಪು ಗ್ರಾಮದ ಅಭಿವೃದ್ಧಿಯ ಹರಿಕಾರರೂ ಆದ ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಕಳದ ವಿಜೇತಾ ವಿಶೇಷ ಶಾಲೆಗೆ, ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಬೆಳ್ಳಿಹಬ್ಬದ ಕೊಡುಗೆಯಾಗಿ ನಿರ್ಮಾಣ ಮಾಡುತ್ತಿರುವ ಮನೆಗೆ ಮತ್ತು ಕಾರ್ಕಳದ ಸುರಕ್ಷಾ ಸೇವಾಶ್ರಮಗಳಿಗೆ ಅಮ್ಮನ ನೆರವು ಫೌಂಡೇಶನ್ ಕೊಡಮಾಡಿದ ತಲಾ 10,000 ರೂ.ಗಳ ಸಹಾಯಧನವನ್ನು ಹಸ್ತಾಂತರ ಮಾಡಿ ಶುಭಕೋರಿದರು. ಮಾಜಿ ಜಿ ಪಂ. ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ನಿಟ್ಟೆ ಮೆಸ್ಕಾಂನ ಸಹಾಯಕ ಅಭಿಯಂತರರಾದ ವಿನಾಯಕ್ ಕಾಮತ್, ಬೆಳ್ಮಣ್ ಜೆಸಿಐ ಅಧ್ಯಕ್ಷ ಇನ್ನಾ ಪ್ರದೀಪ್ ಶೆಟ್ಟಿ, ಹೋಟೆಲ್ ಉದ್ಯಮಿ ಜಗದೀಶ್ ಶೆಟ್ಟಿ, ಸಾಹಿತಿ ರೇಷ್ಮಾ ಶೆಟ್ಟಿ ಗೋರೂರು ಅವರು ಕಾರ್ಯಕ್ರಮದ ಅತಿಥಿಗಳಾಗಿದ್ದರು. ಬೆಳ್ಮಣ್ ಜ್ಯೂನಿಯರ್ ಕಾಲೇಜಿನ ಪ್ರಾಚಾರ್ಯರಾದ ವಿನ್ಸೆಂಟ್ ಡಿಸೋಜಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅಮ್ಮನ ನೆರವು ಫೌಂಡೇಶನ್ ಅಧ್ಯಕ್ಷರಾದ ಅವಿನಾಶ್ ಜಿ ಶೆಟ್ಟಿ ಅವರು ಈ ವರ್ಷದಲ್ಲಿ ಕಾರ್ಕಳ ತಾಲೂಕಿನ ಸರಕಾರಿ ಶಾಲೆಗಳ ಮಕ್ಕಳಿಗೆ 16 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು ಅದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಟ್ರಸ್ಟಿನ ಸಲಹೆಗಾರರಾದ ವಸಂತ್ ಎಂ ಅವರು ವಿದ್ಯಾರ್ಥಿವೇತನದ ವಿವರ ನೀಡಿದರು. ಶಿಕ್ಷಕ ರಾಜೇಂದ್ರ ಭಟ್ ಕೆ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಮುಖ್ಯ ಶಿಕ್ಷಕ ಗೋಪಾಲ್ ಅವರು ಧನ್ಯವಾದ ಸಲ್ಲಿಸಿದರು.