‘ಇದು ಸಮಗ್ರ ವ್ಯವಸ್ಥೆಗೆ ನಾಚಿಕೆಗೇಡು’ ಎಂದು ಆಕ್ರೋಶ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಆಸಿಡ್ ಪ್ರಕರಣಗಳ ವಿಚಾರಣೆಯಲ್ಲಿ ದೀರ್ಘಕಾಲದ ವಿಳಂಬದ ಕುರಿತು ಬೇಸರ ವ್ಯಕ್ತಪಡಿಸಿದ್ದು ದೇಶದ ಎಲ್ಲಾ ಹೈಕೋರ್ಟ್ ಗಳ ರಿಜಿಸ್ಟ್ರಾರ್ ಜನರಲ್ ಗಳಿಗೆ ಬಾಕಿ ಇರುವ ಪ್ರಕರಣಗಳ ವರದಿ ನೀಡುವಂತೆ ಹೈಕೋರ್ಟ್ ಗಳಿಗೆ ಸೂಚನೆ ನೀಡಿದೆ.
ಆಸಿಡ್ ದಾಳಿಯಿಂದ ಬದುಕುಳಿದವರ ಪರವಾಗಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯ ಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು 2009ರಲ್ಲಿ ದಿಲ್ಲಿಯಲ್ಲಿ ಆಸಿಡ್ ದಾಳಿಗೆ ಗುರಿಯಾಗಿ ಬದುಕುಳಿದ ಮಹಿಳೆ ವೈಯುಕ್ತಿಕವಾಗಿ ಹಾಜರಾಗಿ 16 ವರ್ಷ ಕಳೆದರೂ ವಿಚಾರಣೆ ಇನ್ನೂ ಮುಗಿದಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದರು.
ಇದರಿಂದ ಕೋಪಗೊಂಡ ಸಿಜಿಐ ಸೂರ್ಯಕಾಂತ್ ‘ರಾಷ್ಟ್ರದ ರಾಜಧಾನಿಯಲ್ಲಿಯೇ 16 ವರ್ಷಗಳ ಆಸಿಡ್ ದಾಳಿ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ದೇಶದ ಇತರ ಭಾಗಗಳ ಸ್ಥಿತಿ ಹೇಗಿರಬಹುದು. ಇದು ಸಮಗ್ರ ವ್ಯವಸ್ತೆಗೆ ನಾಚಿಕೇಡು’ ಎಂದು ಅಚ್ಚರಿ ಜೊತೆಗೆ ಅಸಮಾಧಾನ ವ್ಯಕ್ತಪಡಿಸಿದರು.



















