
ಮೈಸೂರು: ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಆರು ತಿಂಗಳ ಮಗು ಮೃತಪಟ್ಟಿರುವ ಘಟನೆ ನಡೆದಿದೆ. ಮನೆಯ ಮುಂಭಾಗದಲ್ಲಿ ಪೂಜೆಗಾಗಿ ಇಡಲಾಗಿದ್ದ ಒಣಗಿದ ದಾಸವಾಳ ಹೂವಿನೊಂದಿಗೆ ಆಟವಾಡುತ್ತಿದ್ದ ಮಗು ಅದನ್ನು ನುಂಗಿದೆ ಎಂದು ತಿಳಿದುಬಂದಿದೆ.
ಇದರಿಂದ ಮಗುವಿಗೆ ತಕ್ಷಣವೇ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಪೋಷಕರು ಆತಂಕಗೊಂಡು ತಕ್ಷಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ.
ಪರಿಶೀಲನೆಯ ವೇಳೆ ಮಗುವಿನ ಗಂಟಲಲ್ಲಿ ಒಣಗಿದ ದಾಸವಾಳ ಹೂವು ಸಿಲುಕಿಕೊಂಡಿದ್ದು, ಅದರಿಂದ ಉಸಿರುಗಟ್ಟುವಿಕೆ ಉಂಟಾಗಿ ಸಾವಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣ ಮಾಡಿದೆ.
ಈ ಪ್ರಕರಣದ ಕುರಿತು ಪೊಲೀಸರು ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.






















































