
ಕಾರ್ಕಳ ಬೈಲೂರಿನ ಉಮಿಕಲ್ ಬೆಟ್ಟದ ಮೇಲೆ ಪ್ರತಿಷ್ಟಾಪನೆಯಾದ ಪರಶುರಾಮ ಪ್ರತಿಮೆಯು ಕಂಚಿನಿಂದ ತಯಾರಿಸಲಾಗಿಲ್ಲ ಎನ್ನುವ ಸತ್ಯವು ಪೋಲಿಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣೆ ಪಟ್ಟಿಯಲ್ಲಿ ಸಾಬೀತಾಗಿದ್ದು ಈ ಕಾರಣದಿಂದ ಬೆಟ್ಟದ ಮೇಲೆ ಮತ್ತೆ ಕಂಚಿನಿಂದಲೇ ತಯಾರಿಸಿದ ಪರಶುರಾಮ ಪ್ರತಿಮೆಯನ್ನು ವಿಧಿವತ್ತಾಗಿ ಪುನರ್ ಪ್ರತಿಷ್ಟಾಪಿಸಬೇಕು ಎಂದು ನಮ್ಮ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದು ಸ್ವಾಗತಾರ್ಹ ಎಂದು ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ತಿಳಿಸಿದ್ದಾರೆ.
ನಕಲಿ ಪರಶುರಾಮ ಪ್ರತಿಮೆಯ ಪ್ರತಿಷ್ಟಾಪನೆಯಿಂದ ಅನೇಕ ವಿವಾದಗಳು ಎದ್ದು ಇದು ಕಾರ್ಕಳದ ಗೌರವಕ್ಕೆ ಬಹುದೊಡ್ಡ ಕಪ್ಪು ಚುಕ್ಕೆಯಾಗಿದೆ, ಶಾಸಕ ಸುನೀಲ್ ಕುಮಾರ್,ರವರ ರಾಜಕೀಯ ಹಿತಾಸಕ್ತಿಗಾಗಿ ಚುನಾವಣೆಯನ್ನು ಗೆಲ್ಲುವುದಕ್ಕೋಸ್ಕರ ಪರಶುರಾಮ ಪ್ರತಿಮೆಯನ್ನು ನಿರ್ಮಿಸಲಾಗಿತ್ತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಉದ್ದೇಶಿತ ಯೋಜನೆಯಂತೆ ಕಂಚಿನಿಂದಲೇ ತಯಾರಿಸಲಾದ ಪರಶುರಾಮನ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿದ್ದರೆ ಅದೊಂದು ಶ್ರದ್ದೆ ಮತ್ತು ಭಕ್ತಿ ನಂಬಿಕೆಗೊಂದು ಗೌರವ ಲಭಿಸುತ್ತಿತ್ತು. ಆದರೆ ಕಂಚಿನ ಲೋಹದ ಹೆಸರಿನಲ್ಲಿ ಪೈಬರ್ ಮತ್ತು ಇತರ ವಸ್ತುಗಳಿಂದ ಪರಶುರಾಮನ ಪ್ರತಿಮೆಯನ್ನು ನಿರ್ಮಿಸಿರುವುದರಿಂದ ಜನರ ಭಾವನೆಗಳು ಮತ್ತು ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿದೆ.
ಪರಶುರಾಮ ಪ್ರತಿಮೆಯು ಕಂಚಿನಿಂದ ತಯಾರಿಸಲಾಗಿಲ್ಲ ಎನ್ನುವ ವಿಚಾರ ಪೋಲಿಸರ ತನಿಖೆಯಿಂದ ಬಹಿರಂಗವಾಗಿದ್ದು, ಜನರ ನಂಬಿಕೆಗೆ ದ್ರೋಹ ಬಗೆದು ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಲಾದ ಈ ಯೋಜನೆಯನ್ನು ಧಾರ್ಮಿಕ ಮುಂದಾಳುಗಳ ಮಾರ್ಗದರ್ಶನದೊಂದಿಗೆ ಮತ್ತೆ ಅದೇ ಜಾಗದಲ್ಲಿ ಕಂಚಿನ ಪರಶುರಾಮ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡುವುದು ಆಸ್ತಿಕ ಜನರ ಕರ್ತವ್ಯವಾಗುತ್ತದೆ. ಇಲ್ಲವಾದರೆ ಇದೊಂದು ಸಾಕ್ಷಾತ್ ದೇವರಿಗೆ ಎಸಗಿದ ಬಹುದೊಡ್ಡ ದ್ರೋಹವಾಗಿ ದೈವ ಶಾಪಕ್ಕೆ ಒಳಗಾಗುವ ಅಪಾಯವೂ ಇದೆ, ಅಷ್ಟು ಮಾತ್ರವಲ್ಲದೆ ಆಸ್ತಿಕ ಜನರಿಗೆ ದ್ರೋಹ ಬಗೆದ ಕೃತ್ಯವಾಗಿ ಇತಿಹಾಸದ ಪುಟ ಸೇರಲಿದೆ.
ಇತಿಹಾಸದಲ್ಲಿ ದಾಳಿಕೋರರಿಂದ ಆಕ್ರಮಣಕ್ಕೊಳಗಾಗಿ ವಿರೂಪಗೊಂಡ ದೈವ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯವನ್ನು ಆಯಾಯ ಕಾಲಕ್ಕನುಗುಣವಾಗಿ ಆಗಿನ ಪ್ರಾಜ್ಙಾರು ಮತ್ತೆ ನಡೆಸಿಕೊಂಡು ತಮ್ಮ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಿದರೋ, ಅದೇ ರೀತಿ ರಾಜಕೀಯ ಹಿತಾಸಕ್ತಿಯಿಂದಾಗಿ ಉಮಿಕಲ್ ಬೆಟ್ಟದ ಮೇಲೆ ಧಾರ್ಮಿಕ ನಂಬಿಕೆಗೆ ಭಂಗವುಂಟಾದ ಯೋಜನೆಯನ್ನು ಮತ್ತೆ ಪುನರ್ ಪ್ರತಿಷ್ಟಾಪಿಸಿ ಜನರ ಧಾರ್ಮಿಕ ಭಾವನೆಯನ್ನು ಎತ್ತಿ ಹಿಡಿಯವುದು ಕೂಡ ನಾಗರಿಕ ಸಮಾಜದ ಕರ್ತವ್ಯವಾಗುತ್ತದೆ, ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ನ್ಯಾಯಾಲಯದಲ್ಲಿ ನಾಗರಿಕ ಸಮಾಜದ ಪರವಾಗಿ ಅರ್ಜಿ ಸಲ್ಲಿಸಿರುವುದು ಸ್ತುತ್ಯರ್ಹ ಕಾರ್ಯವಾಗಿದೆ.
ಕಂಚಿನ ಪರಶುರಾಮ ಪ್ರತಿಮೆಯ ಪುನರ್ ಸ್ಥಾಪನೆಯ ಬಗ್ಗೆ ಒಮ್ಮೆಯೂ ಮಾತನಾಡದ ಶಾಸಕ ಸುನೀಲ್ ಕುಮಾರ್ ಯೋಜನೆಗೆ ಹಣ ಬಿಡುಗಡೆ ಮಾಡಿ ಎಂದು ಪದೇ ಪದೇ ಸರ್ಕಾರಕ್ಕೆ ಆಗ್ರಹಿಸುತ್ತಿರುವುದು ಯಾಕಾಗಿ..? ಬಿಡುಗಡೆಯಾದ ಹಣದಲ್ಲಿ ನಕಲಿ ಪ್ರತಿಮೆ ನಿರ್ಮಿಸಿ ಜನರಿಗೆ ಒಮ್ಮೆ ಮೋಸ ಮಾಡಿದವರು ಮತ್ತೆ ಮತ್ತೆ ಹಣ ಬಿಡುಗಡೆ ಮಾಡಿ ಎನ್ನುತ್ತಿರುವುದು ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುದಕ್ಕಾಗಿಯೆ..?
ಕಂಚಿನ ಪರಶುರಾಮ ಪ್ರತಿಮೆಯನ್ನು ನಿರ್ಮಿಸಲಾಗಿತ್ತು ಎಂದು ಜನರನ್ನು ನಂಬಿಸಲಾಗಿತ್ತು ಆ ನಂಬಿಕೆಗೆ ದ್ರೋಹವಾಗಿದ್ದು ಅಲ್ಲಿ ಮತ್ತೆ ಕಂಚಿನ ಪ್ರತಿಮೆ ನಿರ್ಮಾಣ ಮಾಡುವುದಕ್ಕಾಗಿ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ, ಅವರ ಉದ್ದೇಶವು ಸ್ಪಷ್ಟವಾಗಿದೆ, ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.