ಅನ್ಯಮತೀಯರ ಓಲೈಕೆಯೊಂದಿಗೆ, ಜನಸಾಮಾನ್ಯರ ಸುಲಿಗೆ: ಶಾಸಕ ವಿ. ಸುನಿಲ್ ಕುಮಾರ್

ರಾಜ್ಯ ಕಾಂಗ್ರೆಸ್ ಸರ್ಕಾರ ಚಂಬಲ್ ಕಣಿವೆಯ ದರೋಡೆಕೋರರನ್ನು ಮೀರಿಸುವ ರೀತಿಯಲ್ಲಿ ಜನಸಾಮಾನ್ಯರ ಸುಲಿಗೆಗೆ ನಿಂತಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್ , ಪಾರ್ಕಿಂಗ್ ಟ್ಯಾಕ್ಸ್ , ನೀರಿನ ದರ ಹೆಚ್ಚಳ ಸೇರಿದಂತೆ ಹತ್ತಾರು ರೀತಿಯಲ್ಲಿ ” ತೆರಿಗೆ ಭಯೋತ್ಪಾದನೆ” ನಡೆಸುತ್ತಿರುವ ಸಿದ್ದರಾಮಯ್ಯ ಸರ್ಕಾರ ಗಣೇಶ ಹಬ್ಬದ ಸಂಭ್ರಮದ ಮರುದಿನವೇ ದಸ್ತಾವೇಜುಗಳ ನೋಂದಣಿ ಹಾಗೂ ಮುದ್ರಾಂಕ ಶುಲ್ಕವನ್ನು ಶೇ.1ರಿಂದ ಶೇ. 2ಕ್ಕೆ ಏರಿಸಿದೆ. ಸೋಮವಾರದಿಂದ ಇದು ರಾಜ್ಯಾದ್ಯಂತ ಜಾರಿಗೆ ಬರಲಿದೆ. ಅದೇ ರೀತಿ ಮಂಗಳೂರು ವಿಶ್ವವಿದ್ಯಾಲಯದ ಪಿಜಿ ಕೋರ್ಸ್ ಗಳ ಪ್ರವೇಶ ಶುಲ್ಕವನ್ನು ಹೆಚ್ಚಿಸಲಾಗಿದ್ದು, ಕಾಂಗ್ರೆಸ್ ಸರ್ಕಾರದ ದರ ಏರಿಕೆಯ ಬರೆಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ.
ಒಂದು ಅಂದಾಜಿನ ಪ್ರಕಾರ ರಾಜ್ಯ ಸರ್ಕಾರದ ತೆರಿಗೆ ಭಯೋತ್ಪಾದನೆಯಿಂದ ವಾರ್ಷಿಕ 56 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಆದರೆ ಈ ಹಣ ಎಲ್ಲಿಗೆ ಹೋಗುತ್ತಿದೆ ? ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಯ್ಯಾಪೈಸೆಯಷ್ಟು ಅಭಿವೃದ್ಧಿಯಾಗಿಲ್ಲ, ಗುಂಡಿ ಬಿದ್ದ ರಸ್ತೆ ಮುಚ್ಚಲಾಗುತ್ತಿಲ್ಲ, ಸೋರುತ್ತಿರುವ ಶಾಲಾ ಮಾಳಿಗೆಗಳಿಗೆ ಸೂರಿಲ್ಲ, ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲೂ ಹಗರಣ, ಬಾಣಂತಿಯರಿಗೆ ನೀಡುವ ಪೌಷ್ಠಿಕ ಆಹಾರದಲ್ಲೂ ಹಗರಣ, ಕಾರ್ಮಿಕ ಕಿಟ್ ನಲ್ಲೂ ಗೋಲ್ ಮಾಲ್.
ಅಭಿವೃದ್ಧಿ ವಿಚಾರ ರಾಜ್ಯದಲ್ಲಿ ಸತ್ತೇ ಹೋಗಿದ್ದು, ಸರ್ಕಾರ ಸಲ್ಲದ ವಿಚಾರಗಳ ಮೂಲಕ ಜನರ ದಾರಿ ತಪ್ಪಿಸುವ ಕೆಲಸದಲ್ಲಿ ನಿರತವಾಗಿದೆ. ಧರ್ಮಸ್ಥಳದ ವಿರುದ್ಧ ಎಡಚರು ನಡೆಸಿದ ಷಡ್ಯಂತ್ರ, ಮೈಸೂರು ದಸರಾ ಉದ್ಘಾಟನೆಗೆ ಅನ್ಯಮತೀಯರಿಗೆ ಆಹ್ವಾನ ಇತ್ಯಾದಿ ಸಂಗತಿಗಳನ್ನು ಮುಂದೆ ಬಿಟ್ಟು ಜನರ ಸಮಸ್ಯೆಯನ್ನು ಹತ್ತಿಕ್ಕುವುದೇ ಸಿದ್ದರಾಮಯ್ಯ ಸರ್ಕಾರದ ನಿತ್ಯ ಕಾಯಕವಾಗಿದೆ ಎಂದು ಮಾಜಿ ಸಚಿವರು ಶಾಸಕರಾದ ವಿ. ಸುನಿಲ್ ಕುಮಾರ್ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.