
ಉಡುಪಿ: ಶಾಸಕ ಯಶ್ ಪಾಲ್ ಸುವರ್ಣ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕನಾಗಿ ನನ್ನ ಕ್ಷೇತ್ರದ ಬಗ್ಗೆ ಮಾತನಾಡುವ ಸಂಪೂರ್ಣ ಹಕ್ಕು ನನಗಿದೆ. ಉಡುಪಿ ಪರ್ಯಾಯಕ್ಕೆ ಅನುದಾನ ಕೇಳಿದ್ದಕ್ಕಾಗಿ ಸ್ಪೀಕರ್ ಯುಟಿ ಖಾದರ್ ಟೀಕಿಸಿರುವುದು ಸರಿಯಲ್ಲ. ಪೀಠಕ್ಕೆ ಗೌರವ ನೀಡಿ ನಾನು ಮೌನವಾಗಿದ್ದೆ. ಆದರೆ ಸ್ಪೀಕರ್ ಅವರು ಹಗುರವಾಗಿ ಹರಿಕಥೆ ಬಗ್ಗೆ ಮಾತನಾಡಿದ್ದು ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಎಂದಿಗೂ ದಾರಿ ತಪ್ಪುವ ಚರ್ಚೆ ಮಾಡಿಲ್ಲ. ಅನೇಕ ಶಾಸಕರು ಗಂಟೆಗಳ ಕಾಲ ಮಾತನಾಡುತ್ತಾರೆ. ಉಡುಪಿ ಹಿಂದುತ್ವದ ಜಿಲ್ಲೆ ಎಂಬುದು ಖಾದರ್ ಅವರಿಗೆ ಗೊತ್ತಿದೆ. ಇಲ್ಲಿನ ಅಭಿವೃದ್ಧಿ, ಪರ್ಯಾಯ ಮಹೋತ್ಸವದ ವಿಚಾರ ಬಂದಾಗ ಟೀಕಿಸಿರುವುದು ಸರಿಯಲ್ಲ. ನಾನು ಕಾರ್ಯಕರ್ತನಾಗಿ ಬೆಳೆದು ಶಾಸಕನಾಗಿದ್ದೇನೆ. ಅವರ ಈ ನಡೆಯಿಂದ ನಮ್ಮ ಕಾರ್ಯಕರ್ತರು ನೊಂದಿದ್ದಾರೆ ಎಂದು ಹೇಳಿದರು.





