
12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅಪ್ರಾಪ್ತೆಯ ಖಾಸಗಿ ಅಂಗವನ್ನು ಮುಟ್ಟುವುದು ಅತ್ಯಾಚಾರ ಎಂದು ಹೇಳಲಾಗದು ಮತ್ತು ಅದಕ್ಕೆ ಸಂಬಂಧಿಸಿದ ಕಾಯ್ದೆಗಳಡಿ ಪ್ರಕರಣ ದಾಖಲಿಸಲು ಆಗದು ಎಂದು ಹೇಳಿದೆ. ಈ ಮೂಲಕ ದೋಷಿಯೊಬ್ಬನಿಗೆ ನೀಡಿದ್ದ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, 50,000 ರೂ. ದಂಡ ಛತ್ತೀಸ್‌ಗಢ ಹೈಕೋರ್ಟ್ ಆದೇಶವನ್ನು ಸಹ ರದ್ದುಗೊಳಿಸಿ, ಶಿಕ್ಷೆ ಪ್ರಮಾಣ 7 ವರ್ಷಕ್ಕೆ ಇಳಿಸಿದೆ.
ಪ್ರಕರಣದ ಹಿನ್ನೆಲೆ:
ಲಕ್ಷ್ಮಣ್ ಜಂಗ್ಡೆ ಎಂಬವರು 12 ವರ್ಷದ ಅಪ್ರಾಪ್ತೆಯ ಖಾಸಗಿ ಅಂಗ ಮುಟ್ಟಿದ ಆರೋಪದ ಮೇಲೆ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಛತ್ತೀಸ್‌ಗಢದ ಸ್ಥಳೀಯ ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50,000 ರು. ದಂಡ ವಿಧಿಸಿತ್ತು. 2024ರಲ್ಲಿ ಇದನ್ನು ಛತ್ತೀಸ್‌ಗಢ ಹೈಕೋರ್ಟ್ ಸಹ ಎತ್ತಿ ಹಿಡಿದಿತ್ತು. ಈ ತೀರ್ಪಿನ ವಿರುದ್ಧ ಜಂಗ್ಡೆ ಸುಪ್ರೀಂ ಮೊರೆ ಹೋಗಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾ। ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ನ್ಯಾ। ಜೋಯ್ಮಲ್ಯ ಬಾಗ್ಚಿ ಅವರ ಪೀಠವು, ‘ಅಪ್ರಾಪ್ತೆಯ ಖಾಸಗಿ ಅಂಗವನ್ನು ಸ್ಪರ್ಶಿಸಿದ ಮಾತ್ರಕ್ಕೆ ಅದು ಅತ್ಯಾಚಾರ, ಲೈಂಗಿಕ ಕಿರುಕುಳವಾಗಲ್ಲ. ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆ ಮತ್ತು ಅವರ ತಾಯಿಯ ಹೇಳಿಕೆ ಸಹ ಕಿರುಕುಳ ಸೂಚಿಸಲ್ಲ ಎಂದು ಹೇಳಿ ಛತ್ತೀಸ್‌ಗಢದ ಹೈಕೋರ್ಟ್ ನೀಡಿದ್ದ ತೀರ್ಪು ರದ್ದುಗೊಳಿಸಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿದೆ.








