ಸಹಸ್ರರು ಭಕ್ತಾದಿಗಳ ಭಕ್ತಿ ಭಾವದ ನಡುವೆ ದಿವ್ಯ ಬಲಿಪೂಜೆ

ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ಸಹಸ್ರಾರು ಭಕ್ತಾದಿಗಳ ಭಕ್ತಿಭಾವದ ನಡುವೆ ಸುಮಾರು ಹತ್ತು ದಿವ್ಯ ಬಲಿಪೂಜೆಗಳು ನೆರವೇರಿತು.
ಮಹೋತ್ಸವದ ಮುಖ್ಯ ಸಂದೇಶವಾದ ನಾನು ನಿನ್ನನ್ನು ಪ್ರೀತಿಸಿದ್ದೇನೆ ಎಂಬ ಧ್ಯೇಯ ವಾಕ್ಯದ ಆಧಾರದ ಮೇಲೆ, ಬಡವರ ಬಗೆಗಿನ ಕಾಳಜಿ, ಮಾನವೀಯ ಸೇವೆ ಮತ್ತು ಸಮಾಜದತ್ತ ನಮ್ಮ ಜವಾಬ್ದಾರಿ ಕುರಿತು ಆಳವಾದ ಬೋಧನೆ ನೀಡಲಾಯಿತು. ಪ್ರೀತಿಯ ಸಾಕ್ಷಿಯಾಗಿ ಬಡವರೊಂದಿಗೆ ನಿಂತು, ದುರ್ಬಲರ ಕೈ ಹಿಡಿಯುವ ಕ್ರೈಸ್ತ ಜೀವನದ ಮಹತ್ವವನ್ನು ಯಾಜಕರು ವಿಶೇಷವಾಗಿ ಒತ್ತಿಹೇಳಿದರು.
ಅಲಹಾಬಾದ್ ಧರ್ಮಪ್ರಾಂತ್ಯದ ಪರಮಪೂಜ್ಯ ಲುವಿಸ್ ಮಸ್ಕರೇನ್ಹಸ್ ಅವರು ದಿನದ ಪ್ರಮುಖ ಹಾಗೂ ಆಡಂಬರದ ಸಾಂಭ್ರಮಿಕ ಬಲಿಪೂಜೆ ಅರ್ಪಿಸಿ, ಬಡವರೆಡೆಗೆ ನಮ್ಮ ಏಕಾಗ್ರತೆಯನ್ನು ನೀಡಬೇಕು. ಅವರೆಲ್ಲರು ಕ್ರಿಸ್ತನ ಪ್ರತಿರೂಪ. ಬಡವರೊಂದಿಗೆ ಕ್ರೈಸ್ತ ಜೀವನ ಸರಿದೂಗಿ ನಡೆಯಬೇಕು ಎಂದರು.
ಭಕ್ತರು ಮೊಂಬತ್ತಿ ಬೆಳಗಿಸಿ, ಹರಕೆ ಸಲ್ಲಿಸಿ, ಸಂತ ಲಾರೆನ್ಸ್ ಅವರ ವಿಶೇಷ ಅವಶೇಷಗಳನ್ನು ಕಂಡು ಆಶೀರ್ವಾದ ಪಡೆದರು. ಪವಿತ್ರ ನೀರಿನ ಕೊಳದ ಬಳಿ ನೀರನ್ನು ಚಿಮುಕಿಸಿ, ಪುಷ್ಪಪ್ರಸಾದ ಹಾಗೂ ಪ್ರೋಕ್ಷ ತೀರ್ಥ ಸ್ವೀಕರಿಸಿದರು.
ಮಹೋತ್ಸವಕ್ಕೆ ಮಾಜಿ ಸಚಿವರುಗಳಾದ ರಮಾನಾಥ್ ರೈ ಮತ್ತು ವಿನಯ್ ಕುಮಾರ್ ಸೊರಕೆ, ಪದ್ಮರಾಜ್ ಹೆಗ್ಡೆ, ದಿನೇಶ್ ಹೆಗ್ಡೆ ಮತ್ತಿತರರು ಭೇಟಿ ನೀಡಿದರು. ಉಪಾಧ್ಯಕ್ಷ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹ, ನಿಯೋಜಿತ ಉಪಾಧ್ಯಕ್ಷ ವಂದೀಶ್ ಮಥಾಯಸ್, ನಿಯೋಜಿತ ಕಾರ್ಯದರ್ಶಿ ಮೆಲ್ವಿನ್ ಕ್ಯಾಸ್ತೆಲಿನೊ, ಪಿಯುಸ್ ರೊಡ್ರಿಗಸ್ ಉಪಸ್ಥಿತರಿದ್ದರು.



















