
ಮಂಗಳೂರು: ಅಡಿಕೆಯನ್ನು ಕ್ಯಾನ್ಸರ್ಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವ ಹಿನ್ನೆಲೆ ಅದರ ನಿಷೇಧದ ಬಗ್ಗೆ ಚರ್ಚೆ ನಡೆಯುತ್ತಿರುವುದರಿಂದ, ಕ್ಯಾಂಪ್ಯೂ ಕೇಂದ್ರ ಆರೋಗ್ಯ ಸಚಿವರನ್ನು ಸಂಪರ್ಕಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಅಧೀನದಲ್ಲಿರುವ ಅಂತರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (ಐಎಆರ್ಸಿ) ಅಡಿಕೆಯನ್ನು ಗುಂಪು–1 ವರ್ಗಕ್ಕೆ ಸೇರಿಸಿದ್ದು, ಇದು ಮನುಷ್ಯರಿಗೆ ಕ್ಯಾನ್ಸರ್ ಉಂಟುಮಾಡುವ ಪದಾರ್ಥ ಎಂಬ ಅರ್ಥ ನೀಡುತ್ತದೆ. ಇದೇ ವೇಳೆ, ಅಡಿಕೆಯಲ್ಲಿರುವ ಅರೆಕೊಲಿನ್ಸ್ ಎಂಬ ವಸ್ತುವನ್ನು ಗುಂಪು–2ಬಿ ವರ್ಗದಲ್ಲಿ, ಅಂದರೆ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇರುವ ಪದಾರ್ಥ ಎಂದು ವರ್ಗೀಕರಿಸಲಾಗಿದೆ.
ಈ ಮಧ್ಯೆ, ಡಬ್ಲ್ಯೂಎಚ್ಒ ಜ.30ರಂದು ‘ಅರ್ಕೆನಟ್ ಚಾಲೆಂಜ್: ಟರ್ನಿಂಗ್ ಪಾಲಿಸಿ ಇನ್ ಸೌತ್ ಈಸ್ಟ್ ಇಂಡಿಯಾ ಎಂಬ ಶೀರ್ಷಿಕೆಯಡಿ ವೆಬಿನಾರ್ ಆಯೋಜಿಸಿದ್ದು, ಅದರಲ್ಲಿ ಅಡಿಕೆ ನಿಷೇಧದ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಪ್ಯೂ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದು, ಅಡಿಕೆಯನ್ನು ಕ್ಯಾನ್ಸರ್ ಕಾರಕ ಗ್ರೂಪಿನಿಂದ ಕೈ ಬಿಡುವಂತೆ ಡಬ್ಲ್ಯೂಎಚ್ಒಗೆ ಶಿಫಾರಸು ಮಾಡುವಂತೆ ಒತ್ತಾಯಿಸಲಾಗಿದೆ.



















