
ತಿಪಟೂರು: ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಶುಕ್ರವಾರ ಆಯೋಜಿಸಿದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ದೇವರು ವರ–ಶಾಪ ನೀಡುವುದಿಲ್ಲ, ಅವಕಾಶ ನೀಡುತ್ತಾನೆ. ಶ್ರೀ ಗಂಗಾಧರ ಅಜ್ಜನವರ ಕೃತಿ ಒಂದು ಶ್ರೇಷ್ಠ ಕೃತಿ. ಅವರ ಆಶೀರ್ವಾದ ಪಡೆದವರು ಇಲ್ಲಿಗೆ ಬಂದಿದ್ದೇನೆ. ಮಹಾಶಿವರಾತ್ರಿ ನಂತರ ನಮಗೆ, ನಿಮಗೆ ಎಲ್ಲರಿಗೂ ಒಳ್ಳೆಯ ಕಾಲ ಬರುತ್ತದೆ ಎಂದು ಹೇಳಿದರು.
ಅಜ್ಜನ ಆಶೀರ್ವಾದವೇ ತಮ್ಮ ಶಕ್ತಿ ಎಂದು ಹೇಳಿದ ಅವರು ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ ಸಾವಿರ ದಿನಗಳಾಗಿರುವ ಶುಭದಿನದಲ್ಲಿ ಶ್ರೀಕ್ಷೇತ್ರಕ್ಕೆ ಬಂದಿರುವುದು ಪುಣ್ಯ. ಕಾರ್ಯಕ್ರಮದ ಒತ್ತಡದ ನಡುವೆಯೂ ಮಠದ ಶಕ್ತಿಯೇ ಇಲ್ಲಿಗೆ ಕರೆತಂದಿತು. ನನಗೂ ಅಜ್ಜನಿಗೂ ಇರುವ ಸಂಬಂಧ, ನಂಬಿಕೆ ನಿಮಗೆಲ್ಲ ಗೊತ್ತಿದೆ. ನಾವು ಅವರ ಮಾರ್ಗದರ್ಶನದಲ್ಲಿ ಬದುಕುತ್ತಿದ್ದೇವೆ. ಅವರ ಶಕ್ತಿಯಿಂದಲೇ ಇಲ್ಲಿಯವರೆಗೆ ಬೆಳೆದು ಬಂದಿದ್ದೇನೆ. ಇಲ್ಲದಿದ್ದರೆ ರಾಜ್ಯದಲ್ಲಿ ನಮ್ಮ ಸರ್ಕಾರ ಇಷ್ಟು ಶಕ್ತಿಯುತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಸರ್ಕಾರ ಕೂಡ ಜನರ ಕಲ್ಯಾಣಕ್ಕೆ ಶ್ರಮಿಸುತ್ತಿದೆ ಎಂದು ಹೇಳಿದರು.




