
ಬೆಂಗಳೂರು: ಆಸ್ತಿ ಪಾಲುದಾರಿಕೆಯ ಪ್ರಕರಣವೊಂದರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಮಹತ್ವದ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದು ಅದೇನೆಂದರೆ ಅಗತ್ಯ ಮತ್ತು ಸಕಾರಣವಿಲ್ಲದೆ ಮಗುವಿನ ಪಿತೃತ್ವ ನಿರ್ಧರಿಸಲು ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸುವುದು ವಿವಾಹದ ಪಾವಿತ್ರ್ಯತೆಗೆ ಧಕ್ಕೆ ಆಗಲಿದೆ ಎಂದು ತಿಳಿಸಿದೆ.
ಶಿವಮೊಗ್ಗದ 39 ವರ್ಷದ ಹರೀಶ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವೇಳೆ ಅಗತ್ಯ ಮತ್ತು ಸಕಾರಣವಿಲ್ಲದೆ ಮಗುವಿನ ಪಿತೃತ್ವ ನಿರ್ಧರಿಸಲು ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸುವುದು ವಿವಾಹದ ಪಾವಿತ್ರ್ಯತೆ, ದಂಪತಿಗಳ ಗೌಪ್ಯತೆ ಹಾಗೂ ಘನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಡಿಎನ್‌ಎ ಪರೀಕ್ಷೆ ನಡೆಸುವಂತೆ ಕೋರಿ ಸಲ್ಲಿಸಲಾಗುವ ಅರ್ಜಿಗಳಿಗೆ ಉತ್ತರಿಸುವಾಗ ವಿಚಾರಣಾ ನ್ಯಾಯಾಲಯಗಳು, ಭಾರತೀಯ ಸಾಕ್ಷ್ಯ ಕಾಯ್ದೆಯ-1872ರ ಸೆಕ್ಷನ್ 112ರಲ್ಲಿ ನಿಗದಿಪಡಿಸಿದ ಷರತ್ತುಗಳನ್ನು ಪೂರೈಸದ ಹೊರತು ಡಿಎನ್‌ಎ ಪರೀಕ್ಷೆಗೆ ಅನುಮತಿ ನೀಡಬಾರದು ಎಂದು ಪೀಠವು ಸೂಚಿಸಿದೆ.
ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112 ಸಾಮಾನ್ಯ ಸಂದರ್ಭಗಳಲ್ಲಿ ಮಹಿಳೆಯ ಘನತೆಗೆ ಸಂಬಂಧಿಸಿದಂತೆ ಸೂಕ್ಷ್ಮ ಸಿದ್ಧಾಂತ ಒಳಗೊಂಡಿದ್ದು ಮಗುವಿನ ತಂದೆ ತಾನೇ ಎಂಬುದು ಗೊತ್ತಿದ್ದರೂ ಕೆಲವೊಮ್ಮೆ ಪುರುಷ ನಿರಾಧಾರ ಆರೋಪ ಹೊರಿಸಿ ಮಹಿಳೆಯ ವ್ಯಕ್ತಿತ್ವವನ್ನು ನಾಶ ಮಾಡಿಬಿಡುತ್ತಾನೆ. ಈ ಹುಮ್ಮಸ್ಸಿನಲ್ಲಿ ಡಿಎನ್‌ಎ ಪರೀಕ್ಷೆಗೆ ಕೋರುತ್ತಾನೆ. ಆಗ ಮಹಿಳೆಯ ಘನತೆಗೆ ಪೆಟ್ಟು ಬಿದ್ದಂತಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.