
ಮೈಸೂರು: ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ʻಮೈಸೂರಿಗೆ ನಾಲ್ವಡಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿʼ ಎಂಬ ಹೇಳಿಕೆಗೆ ವಿಪಕ್ಷಗಳಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಲ್ವಡಿ ಅವರ ಕೊಡುಗೆಗಳನ್ನ ಗೌಣ ಮಾಡಬೇಕು ಅಂತ ಹೇಳಿಲ್ಲ. ಮೈಸೂರು ಅಭಿವೃದ್ಧಿಗೆ ನಾಲ್ವಡಿ ಅವರನ್ನ ಬಿಟ್ರೆ ಹೆಚ್ಚು ಅನುದಾನ ಕೊಟ್ಟಿರುವುದು ಸಿಎಂ ಸಿದ್ದರಾಮಯ್ಯ ಅಂತ ಹೇಳಿದ್ದೇನೆ. ನಮ್ಮಪ್ಪ ಮುಖ್ಯಮಂತ್ರಿಯಾದ ಮೇಲೆ ಕೊಟ್ಟಷ್ಟು ಅನುದಾನವನ್ನ ಬೇರೆ ಯಾವ ಮುಖ್ಯಮಂತ್ರಿಗಳೂ ಕೊಟ್ಟಿಲ್ಲ. ಅದನ್ನ ಮಾತ್ರ ನಾನು ಹೇಳಿದ್ದು. ಬಹಿರಂಗವಾಗಿ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನು ದೊಡ್ಡ ವಿಷಯ ಮಾಡುವ ಅವಶ್ಯಕತೆ ಇಲ್ಲ. ನಾನು ಯಾವುದೇ ದುರುದ್ದೇಶ ಇಟ್ಟುಕೊಂಡು ಹೇಳಿದ ಹೇಳಿಕೆಯಲ್ಲ. ನಾಲ್ವಡಿಯವರ ಬಗ್ಗೆ ಸಾಕಷ್ಟು ಗೌರವ ಇದೆ. ಅವರ ಆಡಳಿತ ಎಲ್ಲರಿಗೂ ಸ್ಫೂರ್ತಿ. ಒಡೆಯರ್ ಅವರ ಬಗ್ಗೆ ಸಭೆ ಸಮಾರಂಭಗಳಲ್ಲಿ ಗೌರವಯುತವಾಗಿ ಮಾತನಾಡಿದ್ದೇವೆ. ನಾಲ್ವಡಿ ಅವರನ್ನ ಬಿಟ್ರೆ ಸ್ವಾತಂತ್ರ‍್ಯ ಬಂದ ಮೇಲೆ ಮೈಸೂರು ನಗರಕ್ಕೆ ಯಾವುದೇ ಮುಖ್ಯಮಂತ್ರಿ ಕೊಡದಷ್ಟು ಅನುದಾನವನ್ನ ನಮ್ಮ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟಿದ್ದಾರೆ ಎಂದು ಹೇಳಿದ್ದೇನೆ. ಅದನ್ನ ತಪ್ಪಾಗಿ ಅರ್ಥೈಸುವ ಅಗತ್ಯ ಇಲ್ಲ. ವಿರೋಧ ಪಕ್ಷಗಳು ವಿರೋಧ ಮಾಡಬೇಕು ಅದಕ್ಕಾಗಿ ಮಾತನಾಡುತ್ತಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.