
ಬೆಂಗಳೂರು : ಹಗಲು-ರಾತ್ರಿ ಎನ್ನದೆ ಸಾರ್ವಜನಿಕರ ಸುರಕ್ಷತೆಗೆ ಸೇವೆ ಸಲ್ಲಿಸುವ ರಾಜ್ಯ ಪೊಲೀಸ್ ಸಿಬ್ಬಂದಿಗೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಪೊಲೀಸ್ ಸಿಬ್ಬಂದಿಗೆ ತಮ್ಮ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ದಿನದಂದು ಕುಟುಂಬದೊಂದಿಗೆ ಸಮಯ ಕಳೆಯಲು ಸಾಂದರ್ಭಿಕ ರಜೆ ನೀಡಲು ಮಹತ್ವದ ಆದೇಶ ಹೊರಡಿಸಲಾಗಿದೆ.
ನಿರಂತರ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುವ ಪೊಲೀಸರ ವೈಯಕ್ತಿಕ ಬದುಕಿಗೂ ಮಹತ್ವ ನೀಡುವ ಉದ್ದೇಶದಿಂದ ಡಿಜಿ ಸಲೀಂ ಅವರ ನೇತೃತ್ವದಲ್ಲಿ ಈ ಮಾನವೀಯ ತೀರ್ಮಾನ ಕೈಗೊಳ್ಳಲಾಗಿದೆ. ವಿಶೇಷ ದಿನಗಳಲ್ಲಿ ರಜೆ ದೊರೆತರೆ ಮನೋಬಲ ಹೆಚ್ಚಾಗಿ, ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಸಾಧಿಸಲು ಸಹಕಾರಿಯಾಗುತ್ತದೆ ಎಂದು ಇಲಾಖೆಯು ಅಭಿಪ್ರಾಯಪಟ್ಟಿದೆ.
ಈ ರಜೆಯನ್ನು ಕಡ್ಡಾಯವಾಗಿ ಮಂಜೂರು ಮಾಡುವಂತೆ ಘಟಕಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಸಿಬ್ಬಂದಿಯಿಂದ ಅರ್ಜಿ ಬಂದಲ್ಲಿ ಯಾವುದೇ ಕಾರಣ ಹೇಳದೆ ರಜೆ ನೀಡಬೇಕೆಂದು ಆದೇಶಿಸಲಾಗಿದೆ. ಪೊಲೀಸರ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾದ ಈ ನಿರ್ಧಾರಕ್ಕೆ ಪೊಲೀಸ್ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.



















