
ತುಮಕೂರು : ಹಿಂದುಳಿದ ವರ್ಗಗಳ ಎಲ್ಲ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ವಸಮ್ಮತ ನಾಯಕತ್ವ ಬೆಳೆಸಬೇಕಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರಿನಲ್ಲಿ ನಡೆದ ಬ್ರಹ್ಮರ್ಷಿ ನಾರಾಯಣಗುರು ಜಯಂತಿ ಹಾಗೂ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸರ್ವಸಮ್ಮತ ರಾಜಕೀಯ ನಾಯಕತ್ವ ಬೇಕಿದೆ. ಇದರ ಜತೆಗೆ ಸಾಮಾಜಿಕ, ಸಾಂಸ್ಕ್ರತಿಕ ಹಾಗೂ ಶೈಕ್ಷಣಿಕ ಮುಂದಾಳತ್ವವನ್ನು ಬೆಳೆಸಬೇಕಿದೆ ಎಂದರು.
ಹಿಂದುಳಿದ ವರ್ಗದ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಗಬೇಕಿದ್ದರೆ ಜಾತಿಗಣತಿ ವರದಿ ಮಂಡನೆಯಾಗಬೇಕು ಎಂಬುದರ ಪರ ವಾದಕ್ಕೆ ನಾನು ಬದ್ಧನಿದ್ದೇನೆ. ಇದು ಸಾರ್ವಜನಿಕವಾಗಿ ಚರ್ಚೆಗೆ ಒಳಪಡಬೇಕು. ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕು ಎಂದು ಅಭಿಪ್ರಾಯಪಟ್ಟರು.
ಬ್ರಹ್ಮರ್ಷಿ ನಾರಾಯಣ ಗುರು ಅವರು ಎಲ್ಲ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ಮಹಾನ್ ಸಂತ. ಅವರ ತತ್ವಗಳು ಸಮಾಜಕ್ಕೆ ಆದರ್ಶಪ್ರಾಯವಾಗಿದ್ದು, ಎಲ್ಲರೂ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.ಶಾಸಕ ಜ್ಯೋತಿ ಗಣೇಶ್, ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಉಪಸ್ಥಿತರಿದ್ದರು.







