ತ್ರಿಬಾಷಾ ಸೂತ್ರ ಮುಂದುವರಿಸಲು ಸಿಎಂ ಗೆ ಪತ್ರ ಬರೆದ ಸಭಾಪತಿ ಹೊರಟ್ಟಿ…

ಹಿಂದಿ ವಿಷಯಕ್ಕೆ ಅಂಕ ತೆಗೆದು ಗ್ರೇಡಿಂಗ್ ನೀಡುವುದು ಸರಕಾರದ ತಪ್ಪು ನಿರ್ಧಾರ, ಸರಕಾರ ತ್ರಿಭಾಷಾ ಸೂತ್ರ ಮುಂದುವರಿಸಬೇಕು ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಸಿಎಂ ಗೆ ಪತ್ರ ಬರೆದಿದ್ದಾರೆ.
ಹಿಂದಿ ಭಾಷೆ ಅಲ್ಲದೆ ಕೆಲವೆಡೆ ತೃತೀಯ ಭಾಷೆಯಾಗಿ ಕನ್ನಡ ,ಸಂಸ್ಕೃತ, ಉರ್ದು ,ಇಂಗ್ಲಿಷ್, ಮರಾಠಿ ಭಾಷೆಗಳಿವೆ. ಈ ನೀತಿಯಿಂದಾಗಿ ಈ ಎಲ್ಲಾ ಭಾಷೆಗಳಿಗೂ ಹೊಡೆತ ಬೀಳಲಿದೆ. ಮಕ್ಕಳ ಪರೀಕ್ಷಾ ಸಮಯದಲ್ಲಿ ತಜ್ಞರೊಂದಿಗೆ ಚರ್ಚಿಸದೇ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದಿಯನ್ನು ಆಡಳಿತ ಭಾಷೆ ಮಾಡುವಂತೆ ನಾವು ಒತ್ತಾಯಿಸುವುದಿಲ್ಲ. ಆದರೆ ಕಲಿಕೆಯ ವಿಷಯದಲ್ಲಿ ಬದಲಾವಣೆ ಮಾಡುವುದು ಸರಿಯಲ್ಲ. ಈ ಬಗ್ಗೆ ಸರಕಾರ ಸಾಮಾನ್ಯ ಜ್ಞಾನವು ಇಲ್ಲದಂತೆ ನಡೆದುಕೊಳ್ಳುತ್ತಿದೆ. ಈ ನೀತಿಯನ್ನು ಕೈ ಬಿಟ್ಟು ಮೊದಲಿನ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಸಿಎಂ ಗೆ ಪತ್ರ ಬರೆದಿದ್ದಾರೆ.






















































