
ಬೆಂಗಳೂರು: ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭ, ಇಂದು ಮತ್ತು ನಾಳೆ ಬಿಜೆಪಿಯ ಅಭ್ಯಾಸವರ್ಗ ನಡೆಯಲಿದ್ದು ಅಭ್ಯಾಸವರ್ಗದ ಉದ್ಘಾಟನೆಗೆ ಕೇಂದ್ರ ಮಾನವ ಸಂಪನ್ಮೂಲ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್, ರಾಜ್ಯದ ಪ್ರಭಾರಿ ಡಾ.ರಾಧಾಮೋಹನ್ ಅಗರವಾಲ್ ಅವರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರಿಗೆ 75 ವರ್ಷ ತುಂಬಿದೆ. 2047ರ ವೇಳೆಗೆ ದೇಶವನ್ನು ವಿಕಸಿತ ಭಾರತವಾಗಿ ಮಾಡಲು, ಭಾರತವನ್ನು ನಂ.1 ದೇಶವಾಗಿ ಮಾಡಲು ಅತ್ಯಂತ ಉತ್ಸಾಹ, ಉಲ್ಲಾಸದಿಂದ ಕೆಲಸ ಮಾಡಿ ಅಭಿವೃದ್ಧಿ ಪಥದೆಡೆಗೆ ಒಯ್ಯುತ್ತಿದ್ದಾರೆ. ಅವರ ಹುಟ್ಟುಹಬ್ಬದ ನಿಮಿತ್ತವಾಗಿ ದೇಶಾದ್ಯಂತ ಸೇವಾ ಚಟುವಟಿಕೆಗಳನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.











