
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಣ ಪ್ರಕರಣದಲ್ಲಿ ರಾಹುಲ್ ಗಾಂಧಿ ಹೆಸರು ತಳಕು ಹಾಕದಂತೆ ರಾಜ್ಯ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದೆ.
ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದು ಸಿಟಿ ರವಿ ಹೇಳಿದ್ದಕ್ಕೆ ಕೊಲೆಗಾರ ಪದ ಬಳಸಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಮರ್ಥನೆ ಮಾಡಿಕೊಂಡಿದ್ದರು. ಈ ಘಟನೆ ನಡೆದ ಸಂದರ್ಭದಲ್ಲೇ ಕಾಂಗ್ರೆಸ್ ನಾಯಕರೊಬ್ಬರು ಹೈಕಮಾಂಡ್‌ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಹಿರಿಯ ಪರಿಷತ್ ಸದಸ್ಯ ಕೆಸಿ ವೇಣುಗೋಪಾಲ್ಗೆ ಕರೆ ಮಾಡಿ ಮಾಹಿತಿ ನೀಡಿದ ತಕ್ಷಣವೇ ರಾಹುಲ್ ಗಾಂಧಿಗೆ ಕೆಸಿ ವೇಣುಗೋಪಾಲ್ ವಿಚಾರ ತಿಳಿಸಿದ್ದರು.
ರಾಹುಲ್ ಗಾಂಧಿ ಈ ವಿಚಾರವಾಗಿ ಸಿಟ್ಟಾಗುತ್ತಿದ್ದಂತೆಯೇ ಪರಿಷತ್ ಸದಸ್ಯನಿಗೆ ವೇಣುಗೋಪಾಲ್ ವಾಪಸ್ ಕರೆ ಮಾಡಿ ಸಭಾಪತಿ ಕೊಠಡಿಯಲ್ಲಿ ಇದ್ದಾಗಲೇ ಪರಿಷತ್ ಸದಸ್ಯನಿಗೆ ದೆಹಲಿಯಿಂದ ಕರೆ ಬಂದಿದೆ. ಈ ವೇಳೆ ಕರೆ ಸ್ವೀಕರಿಸಿದ ಪರಿಷತ್ ಸದಸ್ಯ, ಪ್ರಭಾವಿ ಸಚಿವರಿಗೆ ಪೋನ್ ಕೊಟ್ಟಿದ್ದಾರೆ. ಇದೇ ವೇಳೆ, ರಾಹುಲ್ ಗಾಂಧಿ ಹೆಸರು ಈ ವಿಚಾರದಲ್ಲಿ ತಳಕು ಹಾಕಬೇಡಿ ಎಂದು ಸಚಿವರಿಗೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ರಾಹುಲ್ ಗಾಂಧಿ ಹೆಸರು ಯಾಕೆ ಪ್ರಸ್ತಾಪ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.




