
ಉಡುಪಿ: ಜಿಲ್ಲೆಯ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಿವೃತ್ತ ಪ್ಯಾರಾ ಕಮಾಂಡೋ ಹಾಗೂ ಮಾಜಿ ಸೈನಿಕ ಶ್ಯಾಮರಾಜ ಅವರಿಗೆ ಟೋಲ್ ವಿನಾಯಿತಿ ನಿರಾಕರಿಸಿದ ಘಟನೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.
ತಮ್ಮ ಬಳಿ ವಿನಾಯಿತಿ ಪತ್ರವಿದ್ದರೂ ಟೋಲ್ ಪಾವತಿಸಲು ಒತ್ತಾಯಿಸಲಾಗಿದೆ ಎಂದು ಆರೋಪಿಸಿ ಶ್ಯಾಮರಾಜ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದು ವೈರಲ್ ಆದ ಬಳಿಕ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು.
ಘಟನೆ ಬಳಿಕ ಪ್ರತಿಕ್ರಿಯಿಸಿದ ಶ್ಯಾಮರಾಜ ಅವರು, ಟೋಲ್ ಸಿಬ್ಬಂದಿಗಳು ತಮ್ಮ ಬಳಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದು, ತಾವು ಅವರನ್ನು ಕ್ಷಮಿಸಿದ್ದಾಗಿ ತಿಳಿಸಿದ್ದಾರೆ. “ನನ್ನ ಪರವಾಗಿ ಧ್ವನಿ ಎತ್ತಿದ ಎಲ್ಲರಿಗೂ ಧನ್ಯವಾದಗಳು. ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಸಿಬ್ಬಂದಿಗಳು ಭರವಸೆ ನೀಡಿದ್ದಾರೆ” ಎಂದು ಅವರು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸೈನಿಕರು ಪೊಲೀಸರಿಗೆ ದೂರು ನೀಡಿದ್ದು, ಡಿವೈಎಸ್ಪಿ ಪ್ರಭು ಡಿ.ಟಿ ಅವರು ದೂರು ಸ್ವೀಕರಿಸಿದ್ದಾರೆ. ಸಂಬಂಧಪಟ್ಟ ಸಿಬ್ಬಂದಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದಾಗಿ ತಿಳಿಸಿದ್ದು, ಸೈನಿಕರ ಗೌರವಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.



















