
ಬೆಂಗಳೂರು: ಉಪನ್ಯಾಸಕರಿಲ್ಲದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸರಿಯಾಗಿ ಪಾಠ ನಡೆಯುತ್ತಿಲ್ಲ. ಹೀಗಾಗಿ ಖಾಲಿ ಇರುವ ಉಪನ್ಯಾಸಕರ ಹುದ್ದೆ ಶೀಘ್ರ ನೇಮಕಾತಿ ಮಾಡಬೇಕು ಎಂದು ಎಬಿವಿಪಿ ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ. ಅಲ್ಲದೆ ಶೀಘ್ರವೇ ನೇಮಕಾತಿ ಆಗಿಲ್ಲ ಅಂದರೆ ರಾಜ್ಯಾದ್ಯಂತ ಹೋರಾಟ ಮಾಡುವ ಎಚ್ಚರಿಕೆ ಕೂಡ ನೀಡಿದೆ.
ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯದ 430ಕ್ಕೂ ಹೆಚ್ಚು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲದೆ ಪಾಠ ಪ್ರವಚನಗಳು ನಡೆದಿಲ್ಲದಿರುವುದು ಘನ ಸರ್ಕಾರಕ್ಕೆ ತಿಳಿಯದಿರುವ ವಿಚಾರವೇನಲ್ಲ. ಪದವಿ ವಿದ್ಯಾರ್ಥಿಗಳಿಗೆ ಸರಿಯಾದ ಪ್ರಮಾಣದಲ್ಲಿ ತರಗತಿಗಳು ನಡೆಯದೇ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುವುದು ಎಂಬ ಅರಿವಿದ್ದರೂ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಸಮರ್ಪಕ ಕ್ರಮ ಕೈಗೊಳ್ಳದಿರುವುದು ವಿದ್ಯಾರ್ಥಿ ಸಮುದಾಯದಲ್ಲಿ ಅತೀವ ಬೇಸರ ತರಿಸಿದೆ.
ಈಗಾಗಲೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯ ತನ್ನ ಮಧ್ಯಂತರ ಆದೇಶವನ್ನು ನೀಡಿ, ತತಕ್ಷಣ ಉಪನ್ಯಾಸಕರನ್ನು ನೇಮಕಾತಿ ಮಾಡಲು ಸೂಚಿಸಿದರೂ ಕೂಡ ಇದುವರೆಗೂ ಉಪನ್ಯಾಸಕರ ನೇಮಕಾತಿ ಸಂಬಂಧಿಸಿದಂತೆ ಯಾವುದೇ ರೀತಿಯ ಬೆಳವಣಿಗೆಗಳು ಕಂಡುಬಂದಿರುವುದಿಲ್ಲ. ವಿಧಾನಸೌಧದ ಗದ್ದುಗೆದಾರರು ತುಷ್ಟಿಕರಣ, ಸಾಮಾಜಿಕ ವಿಭಜನೆ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಗ್ನರಾಗಿರುವ ಕಾರಣ ನ್ಯಾಯಯುತವಾದ ವಿದ್ಯಾರ್ಥಿಗಳ ಕೂಗು ಕೇಳಿದಂತಿಲ್ಲ. ಆದ್ದರಿಂದ ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರನ್ನು ತ್ವರಿತವಾಗಿ ನೇಮಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯಾದ್ಯಂತ ತರಗತಿಗಳನ್ನು ಬಹಿಷ್ಕರಿಸಿ ತೀವ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಎಬಿವಿಪಿ ಎಚ್ಚರಿಕೆ ನೀಡಿದೆ.






















































