
ಹೊಸದಿಲ್ಲಿ: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆಗೆ ಸಲ್ಲಿಸಿದ ನೋಟಿಸ್ನಲ್ಲಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸದನವನ್ನು ತಪ್ಪುದಾರಿಗೆಳೆದಿದ್ದು ಈ ಹಿನ್ನೆಲೆಯಲ್ಲಿ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಲ್ಲದೇ, ರಾಹುಲ್ ಗಾಂಧಿಯವರಿಗೆ ಮುಂದಿನ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂಬ ಬೇಡಿಕೆಯನ್ನು ಕೂಡ ದುಬೆ ಮುಂದಿಟ್ಟಿದ್ದಾರೆ. ಈ ವಿಷಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸದನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಿಶಿಕಾಂತ್ ದುಬೆ, ರಾಹುಲ್ ಗಾಂಧಿಯವರು ಸೋರ್ಸ್ ಫೌಂಡೇಶನ್, ಫೋರ್ಡ್ ಫೌಂಡೇಶನ್ ಹಾಗೂ ಯುಎಸ್ಎಐಡಿ ಜೊತೆಗೆ ಹೊಂದಿರುವ ಸಂಬಂಧಗಳನ್ನು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಭಾರತ ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಥೈಲ್ಯಾಂಡ್, ಕಾಂಬೋಡಿಯಾ, ವಿಯಟ್ನಾಂ ಮತ್ತು ಅಮೆರಿಕ ಪ್ರವಾಸಗಳನ್ನೂ ನೋಟಿಸ್ನಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.
ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ತೀವ್ರ ಟೀಕೆ ನಡೆಸಿದ ತಕ್ಷಣವೇ ಈ ನೋಟಿಸ್ ಸಲ್ಲಿಕೆಯಾಗಿದೆ. ಈ ಒಪ್ಪಂದವು ದೇಶದ ಇಂಧನ ಭದ್ರತೆ ಹಾಗೂ ಕೃಷಿ ಹಿತಾಸಕ್ತಿಗಳಿಗೆ ಧಕ್ಕೆ ತರಲಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಕೆಲ ಮಾಧ್ಯಮಗಳು ಸರ್ಕಾರ ನೀಡುವ “ಕೀವರ್ಡ್”ಗಳನ್ನೇ ಹಿಡಿದುಕೊಂಡು ಚರ್ಚೆ ನಡೆಸುತ್ತಿದೆ. ನೀವು ನಿಮ್ಮ ಕೆಲಸವನ್ನು ಸ್ವತಂತ್ರವಾಗಿ ಮಾಡಬೇಕು, ಪ್ರತಿದಿನ ಒಂದೇ ಅಜೆಂಡಾವನ್ನು ಮುಂದಿಟ್ಟು ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದು ಹೇಳಿದರು.



















