ಕಾಮಗಾರಿಗೆ ವೇಗ ನೀಡಲು ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ

ಕಾರ್ಕಳ ತಾಲೂಕು, ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾ.ಹೆ _169 ಸಾಣೂರು ಶಾಂಭವಿ ನದಿ ಹೊಸ ಸೇತುವೆ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಸಂಜೆ 4:30 ಗಂಟೆಗೆ ಭೇಟಿ ನೀಡಿದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿಯವರು, ನಿಧಾನ ಗತಿಯಲ್ಲಿ ಕುಂಟುತ್ತಾ ಸಾಗುತ್ತಿರುವ ಹೆದ್ದಾರಿ ಕಾಮಗಾರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸಮಯ ಬದ್ಧವಾಗಿ ಕಾಮಗಾರಿಗಳನ್ನು ನಡೆಸಲು ಕೆಲಸದ ವೇಗವನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಈಗಾಗಲೇ ಸಂಪೂರ್ಣ ಗೊಂಡಿರುವ ಸಾಣೂರು ಶಾಂಭವಿ ನದಿ ಸೇತುವೆಯ ಒಂದು ಭಾಗದ ರಸ್ತೆಯನ್ನು, ವಾಹನ ಸಂಚಾರಕ್ಕೆ ಕೂಡಲೇ ಸಿದ್ಧಪಡಿಸುವಂತೆ ನಿರ್ದೇಶನ ನೀಡಿದರು.


ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ ಕೂಡಲೇ ಪರಿಹಾರ ವಿತರಿಸಿ .
ಸೇತುವೆ ಸಂಪರ್ಕ ರಸ್ತೆಯ ಎರಡು ಜಮೀನುಗಳ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗದೇ ರಸ್ತೆ ನಿರ್ಮಾಣ ಕಾರ್ಯಕ್ಕೆ ತೊಡಕಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸ್ಥಳದಲ್ಲಿಯೇ ಭೂ ಸ್ವಾಧೀನ ಅಧಿಕಾರಿ ಮಹಮ್ಮದ್ ಇಸಾಕ್ ರವನ್ನು ಮೊಬೈಲ್ ಕರೆ ಮೂಲಕ ಸಂಪರ್ಕಿಸಿ, ವಿವರಗಳನ್ನು ಪಡೆದುಕೊಂಡು 3 ತಿಂಗಳ ಒಳಗೆ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣಗೊಳಿಸಿ ಪರಿಹಾರ ವಿತರಿಸುವಂತೆ ಆದೇಶ ನೀಡಿದರು.
ಹೊಸ ಬಸ್ಸು ನಿಲ್ದಾಣಗಳ ನಿರ್ಮಾಣ ಕಾರ್ಯ ಕೂಡಲೇ ಆರಂಭಿಸಲು ಸೂಚನೆ.
ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಕೆಡವಲಾಗಿರುವ 6 ಬಸ್ಸು ನಿಲ್ದಾಣಗಳಿಗೆ ಇನ್ನೂ ಸ್ಥಳ ನಿಗದಿಗೊಳಿಸದಿರುವ ಬಗ್ಗೆ ಸಂಸದರ ಗಮನ ಸೆಳೆದ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಕಳೆದ 3 ವರ್ಷಗಳಿಂದ ಮಳೆ ಬಿಸಿಲಿಗೆ ಬಸ್ಸು ಪ್ರಯಾಣಿಕರು ರಸ್ತೆ ಮಧ್ಯದಲ್ಲಿಯೇ ಅಪಾಯಕಾರಿಯಾಗಿ ಬಸ್ಸನ್ನು ಹತ್ತಿ ಇಳಿಯುತ್ತಿರುವುದರ ಬಗ್ಗೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಬಗ್ಗೆ ದಿಲೀಪ್ ಬಿಲ್ಡ್ ಕಾನ್ ಕಂಪನಿಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಶ್ರೀ ಬಾಲಾಜಿ ಅವರನ್ನು ವಿಚಾರಿಸಿದಾಗ, ಡಿಸೆಂಬರ್ ಮೊದಲ ವಾರದಲ್ಲಿ 6 ಬಸ್ಸು ನಿಲ್ದಾಣಗಳ ನಿರ್ಮಾಣ ಕಾರ್ಯ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.
ಬೀದಿ ದೀಪಗಳ ಅಳವಡಿಕೆ.
ಬೀದಿ ದೀಪಗಳ ಕಂಬಗಳನ್ನು ಸ್ಥಾಪಿಸಿ ಮೂರು ತಿಂಗಳುಗಳು ಕಳೆದರೂ, ಬೀದಿ ದೀಪ ವ್ಯವಸ್ಥೆಗೆ ಚಾಲನೆ ನೀಡದಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದಾಗ, ಹೆದ್ದಾರಿ ಕಾಮಗಾರಿ ಸಂಪೂರ್ಣಗೊಂಡು ಟೋಲ್ ಸಂಗ್ರಹಕ್ಕೆ ಪ್ರಾರಂಭಿಸಿದ ಬಳಿಕ ಸಾಣೂರಿನಿಂದ ಬಿಕರ್ನಕಟ್ಟೆಯವರಿಗೆ ಏಕಕಾಲದಲ್ಲಿ ಬೀದಿ ದೀಪ ವ್ಯವಸ್ಥೆಗೆ ಚಾಲನೆ ನೀಡಲಾಗುವುದು ಎಂದು ಅಧಿಕಾರಿಗಳು ಸಂಸದರಿಗೆ ತಿಳಿಸಿದರು.
ಟ್ರಕ್ ಟರ್ಮಿನಲ್ ಗೊಂದಲ ನಿವಾರಣೆಗೆ ಸೂಚನೆ .
5 ಎಕರೆಯಷ್ಟು ಜಮೀನನ್ನು ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆಂದು ಭೂಸ್ವಾಧೀನಗೊಳಿಸಿರುವ ಬಗ್ಗೆ ಸಾರ್ವಜನಿಕರು ಹೆದ್ದಾರಿ ಅಧಿಕಾರಿಗಳ ಗಮನ ಸೆಳೆದಾಗ, ಗೊಂದಲದ ಹೇಳಿಕೆ ನೀಡಿದ ಗುತ್ತಿಗೆದಾರ ಕಂಪನಿ ಮತ್ತು ಹೆದ್ದಾರಿ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಂಸದರು ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಈ ಯೋಜನೆಯ ಸಮಗ್ರ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸಿ, ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ಸೇತುವೆ ಸಂಪರ್ಕ ರಸ್ತೆ ರಿವರ್ಟ್ಮೆಂಟ್ ಕಾಮಗಾರಿ ಪ್ರಾರಂಭಿಸಲು ಸೂಚನೆ.
ಸೇತುವೆ ಸಂಪರ್ಕ ರಸ್ತೆಗೆ 20 ಅಡಿಯಷ್ಟು ಎತ್ತರದಲ್ಲಿ ಮಣ್ಣು ತುಂಬಿ ರಸ್ತೆ ಮಾಡಿರುವುದರಿಂದ, ಮಣ್ಣು ಜರಿದು ಪಕ್ಕದ ಭತ್ತದ ಗದ್ದೆಗೆ ಸೇರಿ ಬೆಳೆ ಹಾನಿಯಾಗಿರುವ ಬಗ್ಗೆ ಸ್ಥಳೀಯರು ಸಂಸದರ ಗಮನ ಸೆಳೆದರು.
ಮಣ್ಣು ಕೆಳಭಾಗದಲ್ಲಿರುವ ಕೃಷಿ ಭೂಮಿಗೆ ಸೇರದಂತೆ ರಿವೆಟ್ಮೆಂಟ್ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ಸಚಿವರು ಗುತ್ತಿಗೆದಾರ ಕಂಪನಿಗೆ ಸೂಚನೆ ನೀಡಿದರು.
ಹಳೆ ಸೇತುವೆಯನ್ನು ಕೆಡವುವಾಗ ಪಂಚಾಯತ್ ಪೈಪ್ ಲೈನ್ ಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಬಗ್ಗೆ ಪಂಚಾಯತ್ ಅಧ್ಯಕ್ಷರಾದ ಯುವರಾಜ್ ಜೈನ್ ರವರು ಸಂಸದರ ಗಮನ ಸೆಳೆದಾಗ , ಈ ಬಗ್ಗೆ ಪಂಚಾಯತ್ ಆಡಳಿತದ ಜೊತೆಗೆ ಸಮಾಲೋಚಿಸಿ ಸುರಕ್ಷಿತ ಕಾಮಗಾರಿ ಕೈಗೊಳ್ಳುವಂತೆ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು.
2 ಕಿಲೋಮೀಟರ್ ಸರ್ವಿಸ್ ರಸ್ತೆ ನಿರ್ಮಾಣ .
ಸುಮಾರು ಎರಡು ಕಿಲೋ ಮೀಟರ್ ಎರಡು ಬದಿಗಳಲ್ಲಿ ಸರ್ವಿಸ್ ರೋಡ್ ನಿರ್ಮಾಣದ ಬಗ್ಗೆ ಸಂಸದರು ಅಂದಾಜು ಪಟ್ಟಿ ಸಲ್ಲಿಸುವಂತೆ ಯೋಜನಾಧಿಕಾರಿಗಳಿಗೆ ಪತ್ರ ಬರೆದರೂ, ಯಾವುದೇ ಕಾರ್ಯ ಪ್ರಗತಿಯಾಗದಿರುವ ಬಗ್ಗೆ ಸಾಣೂರು ನರಸಿಂಹ ಕಾಮತ್ ರವರು ಸಂಸದರ ಗಮನ ಸೆಳೆದರು.
ಈ ಬಗ್ಗೆ ಸ್ಥಳದಲ್ಲಿದ್ದ ಹೆದ್ದಾರಿ ಇಂಜಿನಿಯರ್ ರವರನ್ನು ಪ್ರಶ್ನಿಸಿದಾಗ, ಮೂಲ ಯೋಜನೆಯಲ್ಲಿರುವ ಚತುಷ್ಪಥ ಕಾಮಗಾರಿ ಮುಗಿದ ಬಳಿಕ ಹೊಸದಾಗಿ ಸರ್ವಿಸ್ ರೋಡ್ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಸಂಸದರಿಗೆ ತಿಳಿಸಿದರು.
ತಡೆಗೋಡೆ ವಿಸ್ತರಣೆ ಕಾಮಗಾರಿ
ಸಾಣೂರು ಯುವಕ ಮಂಡಲದ ಆಟದ ಮೈದಾನ ದ ಬದಿಗೆ ತಡೆಗೋಡೆ ವಿಸ್ತರಣೆ ಕಾಮಗಾರಿ ಬಗ್ಗೆ ಯಾವುದೇ ಕಾರ್ಯ ಪ್ರಗತಿ ಆಗದಿರುವ ಬಗ್ಗೆ ಸಾಣೂರು ಯುವಕ ಮಂಡಲದ ಅಧ್ಯಕ್ಷರಾದ ಶ್ರೀಪ್ರಸಾದ್ ಶೆಟ್ಟಿ ಯವರು ಅಸಮಾಧಾನ ವ್ಯಕ್ತಪಡಿಸಿದಾಗ, ತಾಂತ್ರಿಕ ತೊಂದರೆಗಳಿಂದಾಗಿ ತಡೆಗೋಡೆ ವಿಸ್ತರಣಾ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಇಲಾಖಾ ವಿವಾದ ಬಗೆಹರಿದ ಬಳಿಕ ಈ ಬಗ್ಗೆ ಕಾರ್ಯಪವೃತ್ತರಾಗುವುದಾಗಿ ಇಲಾಖಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದರ ಆಪ್ತ ಕಾರ್ಯದರ್ಶಿ ರಾಘವೇಂದ್ರ, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗಳಾದ ಆಶಿಕ. ಜಿ .ಗೌಡ, ನಾಸಿರ್ ,ಸಾಣೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ,ಸಾಣೂರು ಪಂಚಾಯತ್ ಸದಸ್ಯರುಗಳಾದ ಸತೀಶ್ ಪೂಜಾರಿ, ವಸಂತ ಪೂಜಾರಿ, ಕರುಣಾಕರ ಕೋಟ್ಯಾನ್, ಶ್ರೀಮತಿ ಸರಸ್ವತಿ, ಉದ್ಯಮಿಗಳಾದ ಗಣಪತಿ ಹೆಗ್ಡೆ , ಗ್ರಾಮದ ಪ್ರಮುಖರಾದ ವಿಶ್ವನಾಥ ಶೆಟ್ಟಿ, ಪ್ರವೀಣ ಕೋಟ್ಯಾನ್, ಜಗದೀಶ್ ಶೆಟ್ಟಿಗಾರ್, ರಾಕೇಶ್ ಅಮೀನ್, ಶ್ರೀ ರಾಜೇಶ್ ಉಪಸ್ಥಿತರಿದ್ದರು.







