
ನವದೆಹಲಿ: ರಾಘವ ಛಡ್ಡ ಅವರನ್ನು ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ತೆಗೆದುಹಾಕಿದ ಬೆನ್ನಲ್ಲೇ ಪಕ್ಷದ ಒಳರಾಜಕೀಯ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಚಡ್ಡಾ ಬಿಡುಗಡೆ ಮಾಡಿದ ವಿಡಿಯೋ ಸಂದೇಶಕ್ಕೆ ಆಮ್ ಆದ್ಮಿ ಪಕ್ಷ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಪಕ್ಷದ ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಅನುರಾಗ್ ಧಾಂಡಾ, ಚಡ್ಡಾ ಅವರು ಕಳೆದ ಕೆಲವು ವರ್ಷಗಳಲ್ಲಿ ಬದಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ ಎಂದು ಆರೋಪಿಸಿದರು. ದೇಶದ ಪ್ರಮುಖ ಸಮಸ್ಯೆಗಳನ್ನು ಧೈರ್ಯವಾಗಿ ಎತ್ತಿಹಿಡಿಯುವುದೇ ಪಕ್ಷದ ಧ್ಯೇಯವಾಗಿದ್ದು, ಅದರಿಂದ ದೂರವಾಗಿರುವುದು ವಿಷಾದನೀಯ ಎಂದು ಹೇಳಿದರು.
“ನಾವು ಅರವಿಂದ್ ಕೇಜ್ರಿವಾಲ್ ಅವರ ಸೈನಿಕರು. ನಿರ್ಭೀತವಾಗಿ ಮಾತನಾಡುವುದು ನಮ್ಮ ಗುರುತು. ಮೋದಿ ವಿರುದ್ಧ ಮಾತನಾಡಲು ಭಯಪಟ್ಟರೆ ದೇಶಕ್ಕಾಗಿ ಹೇಗೆ ಹೋರಾಡುತ್ತೀರಿ?” ಎಂದು ಧಾಂಡಾ ಪ್ರಶ್ನಿಸಿದರು. ಸಂಸತ್ತಿನಲ್ಲಿ ಸಿಗುವ ಸಮಯವನ್ನು ಗಂಭೀರ ವಿಷಯಗಳಿಗೆ ಬಳಸಬೇಕೇ ಹೊರತು “ವಿಮಾನ ನಿಲ್ದಾಣದ ಕ್ಯಾಂಟೀನ್ಗಳಲ್ಲಿ ಸಮೋಸಾ ಬೆಲೆ ಕಡಿಮೆ ಮಾಡುವ ಬಗ್ಗೆ ಚರ್ಚಿಸಲು ಅಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ಇದಲ್ಲದೆ, ಗುಜರಾತ್ನಲ್ಲಿ ಕಾರ್ಯಕರ್ತರ ಬಂಧನ, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ನಿರ್ಣಯ ಸೇರಿದಂತೆ ಹಲವು ಸಂದರ್ಭಗಳಲ್ಲಿ ಚಡ್ಡಾ ಪಕ್ಷದ ನಿಲುವಿಗೆ ಬೆಂಬಲ ನೀಡಲಿಲ್ಲ ಎಂದು ಎಎಪಿ ಆರೋಪಿಸಿದೆ. ಸಂಸದರು ಸದನದಿಂದ ಹೊರನಡೆದಾಗಲೂ ಅವರು ಭಾಗವಹಿಸಲಿಲ್ಲ ಎಂಬ ಟೀಕೆ ಕೇಳಿಬಂದಿದೆ.









