ವಸಂತಿ ಇವರಿಗೆ ಪ್ರಶಸ್ತಿ ಪ್ರಧಾನದ ಗೌರವ

ಬೆಂಗಳೂರು, 24 ಮಾರ್ಚ್ 2026:
ಸಂಗೀತ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಾ, ತನ್ನ ಪ್ರತಿಭೆಯಿಂದ ಅನೇಕ ವೇದಿಕೆಗಳನ್ನು ಮೆಚ್ಚಿಸಿದ ಶ್ರೀಮತಿ ವಸಂತಿ ಅವರಿಗೆ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ “ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ – 2026” ನೀಡಿ ಗೌರವಿಸಲಾಯಿತು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸಂಗೀತ ಕ್ಷೇತ್ರದೊಂದಿಗೆ ಮಕ್ಕಳ ಬೆಳವಣಿಗೆಗೆ ಸೇವೆ ಸಲ್ಲಿಸುವ ಅಂಗನವಾಡಿ ಸೇವಾ ವೃತ್ತಿಯನ್ನೂ ಸಮರ್ಥವಾಗಿ ನಿರ್ವಹಿಸುತ್ತಿರುವ ವಸಂತಿಯವರು ಅತ್ಯುತ್ತಮ ಪ್ರತಿಭೆ ಮತ್ತು ಸಮಾಜಸೇವೆಯನ್ನು ಒಂದೇ ಹಾದಿಯಲ್ಲಿ ಸಾಗಿಸುತ್ತಿದ್ದಾರೆ.
ಸಂಗೀತ ಸೇವೆಯ ಸಂಭ್ರಮಯಾನ
ಸಣ್ಣ ವಯಸ್ಸಿನಿಂದಲೇ ಸಂಗೀತದ ಮೇಲಿನ ಅಚಲ ಆಸಕ್ತಿ ಮತ್ತು ನಿಷ್ಠೆಯಿಂದ ಸಾಗಿರುವ ಇವರ ಸಂಗೀತಯಾನ ಹಲವು ಪ್ರಮುಖ ಸಾಧನೆಗಳಿಂದ ಚಿರಸ್ಮರಣೀಯವಾಗಿದೆ.
1992ರಲ್ಲಿ ಆಕಾಶವಾಣಿ ಕಲಾವಿದೆಯಾಗಿ ಗುರುತಿಸಿಕೊಂಡ ಅವರು ಸತತ 15 ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಹಾಡುಗಾರಿಕೆಯ ಮೂಲಕ 8 ವರ್ಷಗಳ ಕಾಲ ಸತತವಾಗಿ ಸೇವೆ ನೀಡಿದ್ದಾರೆ.
ವಿವಿಧ ಸಂಘ–ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿದ್ದು, ಕಲಾ ಕ್ಷೇತ್ರದತ್ತ ಅವರ ಸಮರ್ಪಣೆಯನ್ನು ದೃಢಪಡಿಸಿದೆ.
ಪ್ರಶಸ್ತಿಗೆ ಕಾರಣವಾದ ಗಮನಾರ್ಹ ಸಾಧನೆ
ಸಂಗೀತ ಕ್ಷೇತ್ರದಲ್ಲಿ ನೀಡಿದ ಅಮೂಲ್ಯ ಕೊಡುಗೆ, ಶಿಸ್ತು, ಸಾಮಾಜಿಕ ಜವಾಬ್ದಾರಿಯುತ ಸೇವಾಭಾವನೆ ಹಾಗೂ ಕಲಾಪ್ರಚಾರದಲ್ಲಿ ಸತತ ತೊಡಗಿಸಿಕೊಳ್ಳುವ ಮನೋಭಾವ — ಇವುಗಳನ್ನು ಗುರುತಿಸಿ ಈ ವರ್ಷ ಕರ್ನಾಟಕ ಸರ್ಕಾರ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.
ಅಂಗನವಾಡಿ ಸೇವೆಯ ಜೊತೆಗೆ ಸಂಗೀತ ಕ್ಷೇತ್ರದಲ್ಲಿಯೂ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇವರ ಸಾಧನೆಯನ್ನು ರಾಜ್ಯ ಸರ್ಕಾರ ಗುರುತಿಸಿರುವುದು ಉಡುಪಿ ಜಿಲ್ಲೆ ಮತ್ತು ಕಾರ್ಕಳದ ಜನತೆಗೆ ಹೆಮ್ಮೆಯ ವಿಷಯವಾಗಿದೆ.
ಸಮಾಜ ಸೇವೆ, ಕಲೆ, ಮತ್ತು ಸಂಸ್ಕೃತಿಯ ಹಾದಿಯಲ್ಲಿ ತಮ್ಮದೇ ಆದ ಮೌಲ್ಯಮಯ ಗುರುತು ಮೂಡಿಸಿರುವ ವಸಂತಿಯವರ ಈ ಸಾಧನೆ ಅನೇಕ ಮಹಿಳೆಯರಿಗೆ ಸ್ಪೂರ್ತಿಯಾಗಿದೆ.






















































