
ಕಾರ್ಕಳ : ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 21/06/2025ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಈ ವರ್ಷ ಆಯುಷ್ ಸಚಿವಾಲಯದಿಂದ ಘೋಷಿಸಲಾದ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ”ಎಂಬ ಪರಿಕಲ್ಪನೆ ಯೊಂದಿಗೆ ಯೋಗದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿ_ ವಿದ್ಯಾರ್ಥಿನಿಯರೊಂದಿಗೆ ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು.
ಅರಣ್ಯ ಇಲಾಖೆ ಕುಂದಾಪುರ ವಿಭಾಗ, ಮೂಡಬಿದ್ರೆ ಉಪವಿಭಾಗ ಹಾಗೂ ಕಾರ್ಕಳ ವಲಯದ ಅರಣ್ಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ “ತಾಯಿಯ ಹೆಸರಿನಲ್ಲಿ ಒಂದು ಗಿಡ” ಎಂಬ ವಿಭಿನ್ನ ಕಾರ್ಯಕ್ರಮದ ಅಡಿಯಲ್ಲಿ ಶಾಲಾ ಮೈದಾನದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನಂತರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಆಯುರ್ವೇದ ವೈದ್ಯೆ ಡಾ. ಹರ್ಷ ಕಾಮತ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳು “ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಗಿಡ ನೆಡುವುದರ ಮೂಲಕ ಪರಿಸರವನ್ನು ರಕ್ಷಿಸೋಣ “ಎಂದು ಮಕ್ಕಳಿಗೆ ತಿಳಿ ಹೇಳಿ ಪರಿಸರದ ಬಗ್ಗೆ ಕಾಳಜಿ ಮೂಡಿಸಿದರು. ಡಾ. ಹರ್ಷ ಕಾಮತ್ ಅವರು ಯೋಗ ಮತ್ತು ಆಯುರ್ವೇದದ ಸಂಯೋಜನೆಯಿಂದ ಸಮತೋಲನ ಜೀವನ ಹೇಗೆ ಸಾಧ್ಯ ಎಂಬುದರ ಕುರಿತು ಮಕ್ಕಳಲ್ಲಿ ತಿಳುವಳಿಕೆಯನ್ನು ಮೂಡಿಸಿದರು. ಅತಿಥಿಗಳ ಸಂದೇಶದ ನಂತರ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಹಾಗೂ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು. ಆರೋಗ್ಯ ಮತ್ತು ಯೋಗದ ಸಂದೇಶವನ್ನು ಸಮುದಾಯದೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿ_ ವಿದ್ಯಾರ್ಥಿನಿಯರ ತಂಡ ಶಿಕ್ಷಕಿಯರೊಂದಿಗೆ ಶಿವತಿಕೆರೆ ಉಮಾಮಹೇಶ್ವರಿ ದೇವಸ್ಥಾನ, ಕಾರ್ಕಳ ಮಾರಿಗುಡಿ ದೇವಸ್ಥಾನ, ತಾಲೂಕು ಕಚೇರಿ, ಪರಪು ಅಂಗನವಾಡಿ, ಎಂ. ಆರ್. ಎಫ್ ಘಟಕ ನಿಟ್ಟೆ, ಬಂಗ್ಲೆಗುಡ್ಡೆ, ಬಸ್ ನಿಲ್ದಾಣ ,ಆನೆಕೆರೆ ಚತುರ್ಮುಖ ಜೈನ ಬಸದಿ,ಆನೆಕೆರೆ ಉದ್ಯಾನವನ ಸೇರಿದಂತೆ ವಿವಿಧ ಕಡೆಗಳಿಗೆ ಭೇಟಿ ನೀಡಿ ಯೋಗಾಸನದ ಪ್ರಾತ್ಯಕ್ಷತೆಯನ್ನು ಪ್ರದರ್ಶಿಸಿ, ಯೋಗಾಭ್ಯಾಸದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಉತ್ತಮ ಪ್ರಯತ್ನವನ್ನು ಮಾಡಿದರು.ಇದರೊಂದಿಗೆ ಮುಖ್ಯವಾಗಿ ಶಾಲಾ ಪೋಷಕರು ಕೂಡಾ ಈ ಯೋಗಾಸನ ಪ್ರಾತ್ಯಕ್ಷತೆಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉತ್ತೇಜಿಸಿದುದು ಅಭಿನಂದನೀಯ.
ಸಂಸ್ಥೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್. ಕಾಮತ್, ಶಿಕ್ಷಕವೃಂದ, ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.
















































