ನೂತನ ಇಕೋ ಕ್ಲಬ್ ಘಟಕ, “ಭೂ ವನ” ಉದ್ಘಾಟನೆ

ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ ಇಲ್ಲಿ ದಿನಾಂಕ 05.07.2025 ರಂದು ನೂತನ ಇಕೋ ಕ್ಲಬ್ ಘಟಕ -ಭೂ ವನ’ ಉದ್ಘಾಟನೆಗೊಂಡಿತು.
ಸ್ವಚ್ಛ ಬ್ರಿಗೇಡ್ ಕಾರ್ಕಳ ಇದರ ಸಕ್ರಿಯ ಸದಸ್ಯರಾದ ಶ್ರೀಮತಿ ದಿವ್ಯ ಅರ್ಜುನ್ ಕುಮಾರ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪರಿಸರದಲ್ಲಿರುವ ತ್ಯಾಜ್ಯ ವಸ್ತುಗಳ ವಿಂಗಡಣೆ ಹಾಗೂ ಅದರ ಮರುಬಳಕೆಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಮಾರ್ಗದರ್ಶನ ನೀಡಿದರು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯವರಾದ ಡಾ. ಮಂಜುನಾಥ್ ಕೋಟ್ಯಾನ್ ಅವರು ಮಾತನಾಡಿ, ನಮ್ಮ ಪರಿಸರವು ಸ್ವಚ್ಛವಾಗಿರಬೇಕಾದರೆ, ನಾವೆಲ್ಲರೂ ಪರಿಸರ ಸಂರಕ್ಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಕೈಜೋಡಿಸಬೇಕು. ಈ ಸುಂದರವಾದ ಪ್ರಕೃತಿಯನ್ನು, ಉಪಯೋಗಿಸುವ ಅಧಿಕಾರ ಮಾತ್ರ ನಮಗೆ ಇದೆ; ಆದರೆ ಅದನ್ನು ನಾಶ ಮಾಡುವ ಅಧಿಕಾರ ಇಲ್ಲ. ಗಿಡಗಳನ್ನು ನೆಡುವುದು ನಮ್ಮ ಕರ್ತವ್ಯ ಹಾಗೂ ಹಕ್ಕು ಎಂದು ಭಾವಿಸಿ, ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ಕೋಟ್ಯಾನ್ ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಇಕೋ ಕ್ಲಬ್ ಶಾಲಾ ಘಟಕದ ಅಧ್ಯಕ್ಷರಾದ ಮಾಸ್ಟರ್ ಸಂಕಲ್ಪ್ ಇವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸ್ವಚ್ಛ ಬ್ರಿಗೇಡ್ ಕಾರ್ಕಳ ಇದರ ಸದಸ್ಯರಾದl ಅರ್ಜುನ್ ಕುಮಾರ್ ಹಾಗೂ ಶ್ರೀಮತಿ ಮನೀಶಾ ಕಾಮತ್ ಇವರು ಉಪಸಿತರಿದ್ದರು. ವಿದ್ಯಾರ್ಥಿನಿ ಕುಮಾರಿ ದೃಷ್ಟಿ ಹೆಗ್ಡೆ ಇವರು ಕಾರ್ಯಕ್ರಮವನ್ನು ನಿರೂಪಿಸಿ, ವಿದ್ಯಾರ್ಥಿಯಾದ ಮಾಸ್ಟರ್ ವಿದ್ವತ್ ಇವರು ಧನ್ಯವಾದವಿತ್ತರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಯ ಕುರಿತು ಪ್ರಹಸನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.