
ಮಂಗಳೂರು: ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಸಂಸತ್ತಿನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ಪ್ರಚೋದನಾಕಾರಿ ಹಾಗೂ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದು ಇದೀಗ ಈ ಕುರಿತು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಭರತ್ ಶೆಟ್ಟಿ ಗಂಡು ಮಗ ಆಗಿದ್ದರೆ ನಮ್ಮ ಸಾಮಾನ್ಯ ಕಾರ್ಯಕರ್ತನ ಮೈ ಮುಟ್ಟಿನೋಡಲಿ ಎಂದು ಸವಾಲು ಹಾಕಿದ್ದಾರೆ.
ರಾಹುಲ್ ವಿರುದ್ಧ ಖಂಡನಾರ್ಹ ಹೇಳಿಕೆ ನೀಡಿರುವ ವಿರುದ್ಧ ರಾಜ್ಯ ಸರ್ಕಾರ ಸುಮೊಟೋ ಪ್ರಕರಣ ದಾಖಲಿಸಬೇಕು. ಡಾ.ಭರತ್ ಶೆಟ್ಟಿ, ರಾಹುಲ್ ಗಾಂಧಿಯ ಕಪಾಲಕ್ಕೆ ಹೊಡೆಯುವ ಹೇಳಿಕೆ ಮೂಲಕ ಬಿಜೆಪಿ ಹಿಂಸೆಯನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ ಆಗಿದೆ. ಬಿಜೆಪಿಯ ಈ ಹಿಂಸಾ ಪ್ರವೃತ್ತಿಯನ್ನೇ ರಾಹುಲ್ ಗಾಂಧಿ ವಿರೋಧಿಸಿ ಹೇಳಿಕೆ ನೀಡಿದ್ದು ಎಂದು ಹೇಳಿದ ರಮಾನಾಥ ರೈ ಬೆಳ್ತಂಗಡಿಯಲ್ಲಿ ಶಾಸಕರು ಅಧಿಕಾರಿಗಳ ಮೇಲೆ ಕೈ ಮಾಡಲು ಹೋಗಿದ್ದಾರೆ. ಬಿಜೆಪಿ ಸಮುದಾಯ ಮಧ್ಯ ವಿಭಜನೆ ಮಾಡಿ ಮತ ಗಳಿಸುವ ಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.





