ಕಾರ್ಕಳ ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ “ನಾಯಕತ್ವ ತರಬೇತಿ ಶಿಬಿರ”

ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ನಾಯಕತ್ವ ತರಬೇತಿ ಕಾರ್ಯಕ್ರಮದ ಅವಶ್ಯಕತೆ ಇದೆ. ಜೀವನದ ಗುರಿಯನ್ನು ನಿರ್ಧರಿಸುವುದು ಮಾತ್ರವಲ್ಲದೆ ಅದನ್ನು ಪರಿಪೂರ್ಣವಾಗಿ ಯಶಸ್ವಿಗೊಳಿಸುವಲ್ಲಿ ಇಂತಹ ತರಬೇತಿ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸುತ್ತದೆ. ಶಾಲಾ ದಿನಗಳಲ್ಲಿಯೇ ನಾವೆಲ್ಲರೂ ಕೂಡ ನಾಯಕತ್ವ ಗುಣಗಳನ್ನು ಕಲಿತು ಅದನ್ನು ಅಳವಡಿಸಿಕೊಳ್ಳಬೇಕು ಎಂದು ಖ್ಯಾತ ವಕೀಲರು ಹಾಗೂ ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ ಇದರ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಯುತ ಎಂ ಕೆ ವಿಪುಲ್ ತೇಜ್ ಇವರು ಹೇಳಿದರು.
ಇವರು ದಿನಾಂಕ 14-07-2025 ರಂದು, ಎಂ ಆರ್ ಪೈ ಫೌಂಡೇಶನ್ ಮುಂಬೈ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ, ಇಲ್ಲಿನ 9ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆದ ಎರಡು ದಿನಗಳ ನಾಯಕತ್ವ ತರಬೇತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಚಾಲಕರಾದ ಕೆ ವೆಂಕಟೇಶ್ ಪ್ರಭು ಇವರು ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವಂತಹ ನಾಯಕತ್ವ ತರಬೇತಿ ಶಿಬಿರವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು, ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡಾಗ ಜೀವನದಲ್ಲಿ ಎದುರಾಗುವ ಎಂತಹ ಕಠಿಣ ಸವಾಲುಗಳನ್ನು ಕೂಡ ಎದುರಿಸಬಹುದು ಎಂದು ಹೇಳಿದರು.
ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ಕೋಟ್ಯಾನ್ ಇವರು ಸ್ವಾಗತಿಸಿದರು. ತರಬೇತುದಾರರಾಗಿ ಆಗಮಿಸಿದ ಶ್ರೀಮತಿ ಕ್ಲಾರಿಸಾ ಜತ್ತನ ಇವರು ತರಬೇತಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಇನ್ನೋರ್ವ ತರಬೇತುದಾರರಾದ ಶ್ರೀಯುತ ಸುಧೀರ್ ಪೈ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಮಾಸ್ಟರ್ ಆರವ್ ನಾಯರ್ ಇವರು ಕಾರ್ಯಕ್ರಮವನ್ನು ನಿರೂಪಿಸಿ; ಕುಮಾರಿ ಅದಿತಿ ಶೆಟ್ಟಿ ಇವರು ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.






















































