
ನವದೆಹಲಿ: ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆ ಮತ್ತು ಅದರೊಂದಿಗೆ ಉಂಟಾಗುವ ಅಪಾಯಗಳನ್ನು ನಿಯಂತ್ರಿಸುವ ಉದ್ದೇಶದಿಂದ, ಯೂಟ್ಯೂಬ್ ಹಾಗೂ ವಾಟ್ಸಪ್ ಸಂಸ್ಥೆಗಳು ಮಕ್ಕಳ ಖಾತೆಗಳ ಮೇಲಿನ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಪೋಷಕರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಹೊಸ ವ್ಯವಸ್ಥೆಗಳನ್ನು ಪರಿಚಯಿಸಲು ಮುಂದಾಗಿವೆ.
ಯೂಟ್ಯೂಬ್‌ನಲ್ಲಿ ಪ್ರಸಾರವಾಗುವ ಕೆಲವೇ ಕ್ಷಣಗಳ ಶಾರ್ಟ್ಸ್ ಹಾಗೂ ಮಕ್ಕಳ ವಾಟ್ಸಪ್ ಖಾತೆಗಳ ನಿರ್ವಹಣೆಯನ್ನು ಪೋಷಕರ ಕೈಗೆ ನೀಡುವ ತೀರ್ಮಾನ ಕೈಗೊಳ್ಳಲಾಗಿದ್ದು, ಈ ವ್ಯವಸ್ಥೆಗಳು ಪ್ರಸ್ತುತ ಅಭಿವೃದ್ಧಿ ಹಂತದಲ್ಲಿವೆ.
ಯೂಟ್ಯೂಬ್ ಶಾರ್ಟ್ಸ್‌ಗಳ ಪರಿಣಾಮವಾಗಿ ಮಕ್ಕಳ ಮೊಬೈಲ್ ಬಳಕೆ ಹೆಚ್ಚಾಗುತ್ತಿರುವುದರ ಜೊತೆಗೆ ಅವರ ಗಮನಕ್ಷಮತೆ ಕುಸಿಯುತ್ತಿದೆ. ಇದಕ್ಕೆ ಪರಿಹಾರವಾಗಿ, ಮುಂದಿನ ದಿನಗಳಲ್ಲಿ ಮಕ್ಕಳು ಎಷ್ಟು ಸಮಯ ಶಾರ್ಟ್ಸ್ ವೀಕ್ಷಿಸಬಹುದು ಎಂಬುದನ್ನು ಪೋಷಕರೇ ನಿಗದಿಪಡಿಸಬಹುದಾಗಿದ್ದು ಅಗತ್ಯವಿದ್ದರೆ ಈ ಸಮಯವನ್ನು ಸಂಪೂರ್ಣ ಶೂನ್ಯಕ್ಕೆ ಹೊಂದಿಸಿ, ಮಕ್ಕಳನ್ನು ಶಾರ್ಟ್ಸ್‌ಗಳಿಂದ ದೂರವಿಡುವ ಅಧಿಕಾರವೂ ಪೋಷಕರಿಗೆ ಸಿಗಲಿದೆ. ಈ ನಿಯಂತ್ರಣಗಳನ್ನು ಪೋಷಕರು ತಮ್ಮ ಮೊಬೈಲ್‌ಗೆ ಮಕ್ಕಳ ಖಾತೆಗಳನ್ನು ಲಿಂಕ್ ಮಾಡುವ ಮೂಲಕ ನಿರ್ವಹಿಸಬಹುದು.
ಇನ್ನೊಂದೆಡೆ, ಈ ಮೆಸೇಜಿಂಗ್ ಆ್ಯಪ್‌ನ ದುರ್ಬಳಕೆಯನ್ನು ತಡೆಯುವ ಸಲುವಾಗಿ, ಪೋಷಕರು ತಮ್ಮ ವಾಟ್ಸಪ್ ಖಾತೆಗೆ ಮಕ್ಕಳ ಖಾತೆಗಳನ್ನು ಲಿಂಕ್ ಮಾಡಿ ನಿಯಂತ್ರಿಸುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಮಕ್ಕಳ ಡಿ.ಪಿ., ಸ್ಟೇಟಸ್ ಮತ್ತು ಬ್ಲೂ ಟಿಕ್‌ಗಳನ್ನು ಯಾರು ವೀಕ್ಷಿಸಬಹುದು ಎಂಬುದನ್ನು ಪೋಷಕರೇ ನಿರ್ಧರಿಸಬಹುದು. ಅದೇ ವೇಳೆ, ಮಕ್ಕಳ ಗೌಪ್ಯತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು, ಅವರ ಸಂದೇಶಗಳು ಮತ್ತು ಕರೆಗಳನ್ನು ಪೋಷಕರು ವೀಕ್ಷಿಸಲು ಅವಕಾಶ ಇರುವುದಿಲ್ಲ. ಆದರೆ ಈಗಾಗಲೇ ಸೇವ್ ಮಾಡಿರುವ ಸಂಪರ್ಕಗಳೊಂದಿಗಷ್ಟೇ ಮಕ್ಕಳು ಸಂವಹನ ನಡೆಸಲು ಅವಕಾಶ ನೀಡಲಾಗುತ್ತದೆ.



















