20.3 C
Udupi
Wednesday, December 24, 2025
spot_img
spot_img
HomeBlogಶಕ್ತಿಶಾಲಿ ಕುಂದಾಪ್ರ ಕನ್ನಡ ಉಳಿಯಲು ಮಕ್ಕಳು ಮಾತಾಡುವಂತೆ ಹೆತ್ತವರು ಆಸಕ್ತಿ ವಹಿಸಬೇಕು

ಶಕ್ತಿಶಾಲಿ ಕುಂದಾಪ್ರ ಕನ್ನಡ ಉಳಿಯಲು ಮಕ್ಕಳು ಮಾತಾಡುವಂತೆ ಹೆತ್ತವರು ಆಸಕ್ತಿ ವಹಿಸಬೇಕು

ಕಾರ್ಕಳದಲ್ಲಿ ತಾಲೂಕು ಕ.ಸಾ.ಪ ಕಾರ್ಯಕ್ರಮದಲ್ಲಿ, ಹೆಬ್ಬಾರ್ ಕರೆ

“ಕುಂದಾಪ್ರ ಕನ್ನಡವು ಸುಂದರ ಕನ್ನಡ ಭಾಷೆಯ ಅವಿಭಾಜ್ಯ ಅಂಗ. ಇತರ ಪ್ರಾದೇಶಿಕ ಆಡು ಕನ್ನಡದಂತೆ ಕುಂದಾಪ್ರ ಕನ್ನಡ ಇದೆ. ಆದರೆ ಇದರ ಜೋರು, ರಾಪು, ಜಾಪು, ತನಿ, ಒಯ್ಲು, ಹೊಯ್ಲು ಮತ್ತು ರಭಸ ಅತ್ಯಂತ ವಿಶಿಷ್ಟ. ಮಾತಾಡದೇ ಮಾತಾಡದೇ ಅದೆಷ್ಟೋ ಭಾಷೆಗಳು ಕಳೆದು ಹೋಗಿವೆ. ಕುಂದಾಪ್ರ ಕನ್ನಡ ಹಾಗಾಗದಿರಬೇಕಾದರೆ ತಮ್ಮ ಮಕ್ಕಳು ಎಲ್ಲೇ ಇರಲಿ, ಮನೆಯಲ್ಲಾದರೂ ಇದರಲ್ಲೇ ಮಾತಾಡುವಂತೆ ಕುಂದಗನ್ನಡದ ಹೆತ್ತವರು ಆಸಕ್ತಿ ಹೊಂದಬೇಕು. ಆಗ ಮಾತ್ರ ಈ ಸತ್ವಯುತ ಶಕ್ತಿಶಾಲಿ ಭಾಷೆ ಉಳಿದು ಬೆಳೆಯಲು ಸಾಧ್ಯ” ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕಾಧ್ಯಕ್ಷರಾದ, ಕುಂದಾಪ್ರ ಕನ್ನಡದ ಪ್ರಬಲ ಪ್ರವರ್ತಕರಾದ ಸಾಹಿತಿ ಐರೋಡಿ ಶಂಕರನಾರಾಯಣ ಹೆಬ್ಬಾರ್ ರವರು ತಾ. 24 ರಂದು ಕಾರ್ಕಳ ತಾಲೂಕು ಕ ಸಾ ಪ ವತಿಯಿಂದ ಹೋಟೆಲ್ ಪ್ರಕಾಶ ಸಂಭ್ರಮ ಸಭಾಂಗಣದಲ್ಲಿ ಜರಗಿದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ಮಾಡುತ್ತ ಕರೆ ನೀಡಿದ್ದಾರೆ.


“ಎಲ್ಲ ಪ್ರಾದೇಶಿಕ ಆಡುಗನ್ನಡಗಳೂ ಶ್ರೇಷ್ಠವೇ. ಕುಂದಾಪ್ರ ಕನ್ನಡವೇ ಶ್ರೇಷ್ಠ ಎಂಬ ಅಂಧಾಭಿಮಾನ ನಮ್ಮದಲ್ಲ” ಎಂದ ಅವರು ಈ ಭಾಷೆಯೊಂದಿಗೆ ಬದುಕು ಹೇಗೆ ಹಾಸುಹೊಕ್ಕಾಗಿದೆಯೆಂದು ಸ್ವಾರಸ್ಯಕರವಾಗಿ ಬಣ್ಣಿಸಿ ಭಾಷೆ ಬೇರೆ ಅಲ್ಲ, ಬದುಕು ಬೇರೆ ಅಲ್ಲ ಎಂದು ಸೋದಾಹರಣೆಯೊಂದಿಗೆ ವಿವರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜ್ಞಾನಸುಧಾ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಸುಧಾಕರ ಶೆಟ್ಡಿಯವರು ಕಾರ್ಕಳದಲ್ಲಿ ಕುಂದಗನ್ನಡದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿರುವುದು ಭಾಷಾ ಸಾಮರಸ್ಯಕ್ಕೊಂದು ಮಾದರಿ ಎಂದರು. ಮುಖ್ಯ ಅತಿಥಿಯಾದ ಉದ್ಯಮಿ ರಾಮಕೃಷ್ಣ ಆಚಾರ್ ಅಡುಭಾಷೆ ನಮ್ಮ ನೈಜ ಭಾವನೆಗಳನ್ನು ಪೋಷಿಸಿ ಬದುಕನ್ನು ಸಮೃದ್ಧಗೊಳಿಸುತ್ತದೆ ಎಂದರು.
ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದಾಗಿಯೂ, ಕಾರ್ಕಳದ ಜನ ಉತ್ತಮ ಸಹಕಾರ ಮತ್ತು ಸ್ಪಂದನೆ ನೀಡುತ್ತಿರುವುದಾಗಿಯೂ ತಿಳಿಸಿದರು. ನಿತ್ಯಾನಂದ ಪೈ ಪ್ರಾಸ್ತಾವಿಕ ಭಾಷಣ ಮಾಡಿದರು.ಜಿಲ್ಲಾ ಕ ಸಾ ಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಭಾಷಣ ಮಾಡಿದರು. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಗುಣಪಾಲ ಕಡಂಬ, ಕಾರ್ಕಳ ರೋಟರಿ ಅಧ್ಯಕ್ಷರಾದ ನವೀನಚಂದ್ರ ಶೆಟ್ಟಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಶುಭ ಕೋರಿದರು ಹೆಬ್ಬಾರರ ಕುಂದಗನ್ನಡ ಸೇವೆಗಾಗಿ ಅವರನ್ನು ಸನ್ಮಾನಿಸಲಾಯಿತು.
. ಅಷಾಡಿ ತಿಂಗಳ ವಿಶೇಷ ಖಾದ್ಯಗಳಾದ ಮರಗೆಸದ ಪತ್ರೊಡೆ, ಅತ್ತಾಸು, ಹಲಸಿನ ಹಣ್ಣಿನ ಕಡಬ ಇತ್ಯಾದಿ ತಿನಿಸುಗಳನ್ನು ಅತಿಥಿಗಳು ಸವಿದರು. ಧಾರಣಿ ಉಪಾಧ್ಯ ಕುಂದಗನ್ನಡದಲ್ಲಿ ಪ್ರಾರ್ಥಸಿ ಗೀತಾಚಂದ್ರ ಕಾರ್ಯಕ್ರಮ ನಿರೂಪಿಸಿದರು ಪ್ರಕಾಶ್ ನಾಯ್ಕ ವಂದಿಸಿದರು. ನರಸಿಂಹ ಮೂರ್ತಿ, ಶಿವ ಸುಬ್ರಹ್ಮಣ್ಯ ಭಟ್ , ಗಣೇಶ್ ಜಾಲ್ಸೂರು ಸಹಕರಿಸಿದರು.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page