
ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಜೊತೆಗಾರರಿಗೆ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಾತ್ರಿ ಊಟ ವಿತರಿಸುವ ವಿಸ್ತರಿತ ಕಾರುಣ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ಕ್ಯಾಥ್‌ಲ್ಯಾಬ್, ಡೇ ಕೇರ್ ಕಿಮೋಥೆರಪಿ ಸಹಿತ ಅತ್ಯಾಧುನಿಕ ಚಿಕಿತ್ಸೆ ನೀಡುತ್ತಿರುವ ವೆನ್ಲಾಕ್ ಜಿಲ್ಲಾಸ್ಪತ್ರೆ ಮತ್ತು ಪ್ರತಿದಿನ 18-20 ಹೆರಿಗೆ ನಡೆಯುತ್ತಿರುವ ಲೇಡಿಗೋಷನ್ ಆಸ್ಪತ್ರೆಗಳು ರಾಜ್ಯಕ್ಕೆ ಮಾದರಿಯಾಗಿದ್ದು, ಇವೆರಡನ್ನೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದ್ದಾರೆ.
ವೆನ್ಲಾಕ್‌ನಲ್ಲಿ 70 ಕೋಟಿ ರು. ವೆಚ್ಚದಲ್ಲಿ ಹೊರ ರೋಗಿ ವಿಭಾಗ ಸಿದ್ಧಗೊಳ್ಳುತ್ತಿದೆ. ಕೆಎಂಸಿಯಿಂದ 35 ಕೋಟಿ ರು. ಮೊತ್ತದ ಸೌಲಭ್ಯ ಬರಲಿದೆ. ಲೇಡಿಗೋಷನ್‌ನಲ್ಲಿ ಐಐಸಿಯು ನಿರ್ಮಾಣವಾಗಿದೆ. ಇದೆಲ್ಲವನ್ನು ಬಳಸಿಕೊಂಡು ಇನ್ನಷ್ಟು ಸೌಲಭ್ಯ ಕಲ್ಪಿಸಿ ಉತ್ಕೃಷ್ಟ ಆಸ್ಪತ್ರೆಗಳಾಗಿ ಮಾರ್ಪಡಿಸುತ್ತೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸರ್ಕಾರದಿಂದ ಊಟ ಕೊಡುತ್ತಿದ್ದೇವೆ. ಆದರೆ ಅವರ ಜತೆಗಿರುವವರಿಗೆ ಕೊಡಲು ಸಾಧ್ಯವಾಗುತ್ತಿಲ್ಲ. ಅವರು ಹೊರಗೆ ಹೋಗುವುದು ಕಷ್ಟ. ಎಂಫ್ರೆಂಡ್ಸ್ ಕಾರ್ಯ ಶ್ಲಾಘನೀಯ
ಇದನ್ನು ಮನಗಂಡು ವೆನ್ಲಾಕ್ ಆಸ್ಪತ್ರೆಯಲ್ಲಿ 8 ವರ್ಷಗಳಿಂದ ನಿರಂತರ ರಾತ್ರಿ ಊಟ ನೀಡುವ ಎಂಫ್ರೆಂಡ್ಸ್ ಕಾರ್ಯ ಶ್ಲಾಘನೀಯ. ಅದನ್ನು ಲೇಡಿಗೋಷನ್‌ಗೂ ವಿಸ್ತರಿಸಿರುವುದು ಅಭಿಮಾನಪಡುವ ಪುಣ್ಯದ ಕೆಲಸ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ರೋಹನ್ ಕಾರ್ಪೊರೇಶನ್ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ ಅವರ ಪರವಾಗಿ ನಿರ್ದೇಶಕ ಡಿಯೋನ್ ಮೊಂತೇರೊ ಅವರಿಗೆ ಸಚಿವರು ‘ಕರುಣಾಳು ಕನ್ನಡಿಗ’ ಪ್ರಶಸ್ತಿ ಪ್ರದಾನ ಮಾಡಿದರು. ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುಜಾಹ್ ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ ಶುಭ ಹಾರೈಸಿದರು.






















































