
ಬೆಳಗಾವಿ: ಸುವರ್ಣ ವಿಧಾನ ಸೌಧದಲ್ಲಿ ಸತತ ಆರು ತಾಸು ಚರ್ಚೆ ಬಳಿಕ ಪ್ರತಿಪಕ್ಷಗಳ ಬಾರಿ ವಿರೋಧದ ನಡುವೆ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕ-2025 ಕ್ಕೆ ಮೇಲ್ಮನೆಯಲ್ಲಿ ಅಂಗೀಕಾರ ದೊರಕಿದೆ.
ಬಿಜೆಪಿ ಹಾಗೂ ಜೆಡಿಎಸ್ ವಿಧೇಯಕವನ್ನು ತೀವ್ರವಾಗಿ ವಿರೋಧಿಸಿದ್ದು ತಮ್ಮ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾನೂನು ಮೂಲಕ ಕಟ್ಟಿಹಾಕಲು, ಮಾಧ್ಯಮಗಳನ್ನು ನಿಯಂತ್ರಿಸಲು ಕಾಂಗ್ರೆಸ್ ಪಕ್ಷ ಈ ವಿಧೇಯಕ ತರುತ್ತಿದ್ದು ಈ ಮೂಲಕ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸುದೀರ್ಘ ಚರ್ಚೆಯ ಬಳಿಕ ಗೃಹ ಸಚಿವ ಡಾ. ಜಿ ಪರಮೇಶ್ವರ್ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳನ್ನು ಮಟ್ಟ ಹಾಕಬೇಕು ಎಂದು ಸ್ವತಃ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ. ಇಂತಹದಕ್ಕೆ ಕಾನೂನು ತಂದರೆ ವಿರೋಧಿಸುತ್ತಿರಲ್ಲ, ನೀವೆಂತಹ ಜನಪ್ರತಿನಿಧಿಗಳು ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿದ ಪ್ರತಿಪಕ್ಷವು ತುರ್ತುಪರಿಸ್ಥಿತಿಯಲ್ಲಿ ಅನುಭವಿಸಿದ್ದೇವೆ, ಅದಕ್ಕೆ ವಿರೋಧ ಮಾಡುತ್ತಿದ್ದೇವೆ ಎಂದು ಹೇಳಿದ್ದು ಕೊನೆಗೆ ಗಲಭೆ ಗದ್ದಲಗಳ ನಡುವೆಯೇ ಗೃಹ ಸಚಿವರು ವಿಧೇಯಕವನ್ನು ಮಂಡಿಸಿದ್ದಾರೆ.





