ಮನಸು ಮಾಡಿದರೆ ಇರುವೆ ಕೂಡ ದೂರ ಸಾಗಬಹುದು, ಇಲ್ಲದಿದ್ದರೆ ಗರುಡನು ಕೂಡ ಒಂದು ಹೆಜ್ಜೆ ಮುಂದೆ ಸಾಗದಂತೆ
ಪರೀಕ್ಷೆ ನಿಮ್ಮ ಮುಂದಿನ ವ್ಯಾಸಂಗಕ್ಕೆ, ರಾಜಮಾರ್ಗವಾಗಲಿ
ಗಣೇಶ್ ಜಾಲ್ಸೂರು

ಪ್ರಿಯ
ವಿದ್ಯಾರ್ಥಿಗಳೇ…
ನಮಸ್ಕಾರ,
ತಾವೆಲ್ಲರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ತಯಾರಿಯಲ್ಲಿ ಇದ್ದೀರಿ. ಮಾರ್ಚ್ 18 ರಿಂದ ಎಸ್ಸೆಸ್ಸೆಲ್ಸಿ ವಾರ್ಷಿಕ ಬರೆಯಲಿದ್ದೀರಿ. ಇಡೀ ರಾಜ್ಯವೇ ನಿಮ್ಮ ಸಾಧನೆಯನ್ನು ಕಾಣುವ ನಿರೀಕ್ಷೆಯಲ್ಲಿದೆ. ಹಾಗೆಯೇ ಈಗ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಬರೆದು ಒಳ್ಳೆಯ ಅಭ್ಯಾಸ ಮಾಡುತ್ತಿದ್ದೀರಿ. ನಿಮಗೆ ನಾವೆಲ್ಲರೂ ಶುಭ ಹಾರೈಸುತ್ತಿದ್ದೇವೆ. ನೀವೂ ಕೂಡ ಪರೀಕ್ಷೆಯನ್ನು ಬರೆದು ಗೆಲ್ಲುವ ಛಲ ತೊಟ್ಟಿದ್ದೀರಿ. ಅಂತೂ ಈ ಅವಕಾಶವನ್ನು ನೀವೂ ಪಡೆದೇ ಬಿಟ್ಟೀರಿ. ಈ ಬಾರೀ ಗೆಲುವು ನಿಮ್ಮದೇ.
ನಿಮ್ಮ ಒಳ್ಳೆಯ ಪ್ರಯತ್ನಕ್ಕೆ ಒಳ್ಳೆಯ ಪ್ರತಿಫಲ ಖಂಡಿತ ಇದೆ. ದೇವರೇ ನಿಮ್ಮ ನಿರಂತರ ಪರಿಶ್ರಮಕ್ಕೆ ಶುಭವನ್ನು ಹಾರೈಸುವನು. ಸದಾ ಕಾಪಾಡುವನು.
ಸಾಧನೆ ನಿರಂತರವಾಗಿರಲಿ
ಮಕ್ಕಳೇ..
ನೀವೂ ಈ ಮಾತು ಕೇಳಿರಬೇಕು ಅಲ್ವಾ.? “ಸಾಧನೆಗೆ ಅಸಾಧ್ಯವಾದುದು ಯಾವೂದೂ ಇಲ್ಲ;ಆದರೆ ಸಾಧಿಸುವ ಛಲ ಇರಬೇಕು” ಎಂದು. ಹೌದಲ್ವಾ..ಒಂದು ಒಳ್ಳೆಯ ಯೋಚನೆಯಲ್ಲಿ ಒಂದು ಒಳ್ಳೆಯ ಯೋಜನೆಯನ್ನು ಯಶಸ್ಸುಗೊಳಿಸಬಹುದಂತೆ. ಇಂತಹ ಸಾಧನೆಯನ್ನು ಮಾಡಿ ಯಶಸ್ವಿಯಾದ ಸಾಧಕರು ಅದೆಷ್ಟೋ ಮಂದಿ ನಮ್ಮ ಮುಂದೆ ಇದ್ದಾರೆ. ಅದು ಶಿಕ್ಷಣ, ಸಂಗೀತ ,ಸಾಹಿತ್ಯ, ಕ್ರೀಡೆ , ಕಲೆ ಹಾಗೂ ಸಮಾಜ ಸೇವೆ ಹೀಗೇ ಬೇರೆ ಬೇರೇ ಸಾಧನಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದವರು. ಈಗ ನಿಮ್ಮ ಸರದಿ. ಅದೇ ನಮಗೆಲ್ಲರಿಗೂ ಖುಷಿ. ಆರಂಭದಲ್ಲಿ ಸಾಧಕರೂ ಕೂಡ ಒಂದು ಕ್ಷಣ ಯೋಚಿಸಿರಬಹುದೇನೋ, ಇದು ನನ್ನಿಂದ ಸಾಧ್ಯವೇ ಎಂದು ? ಮತ್ತೆ ಅವರೇ ಉತ್ತರ ಕಂಡುಕೊಂಡಿದ್ದು ಏನೂ ಗೊತ್ತಾ ! ಏಕೆ ಸಾಧ್ಯ ಆಗಬಾರದು ? ಎಂದು ಮತ್ತೆ ಪ್ರಶ್ನಿಸುತ್ತಾ ಕೂರಲಿಲ್ಲ. ಸವಾಲುಗಳನ್ನು ಕೈಗೆತ್ತಿಕೊಂಡರು.ಸಮಯ ಪಾಲಿಸಿಕೊಂಡರು. ಕೊನೆಗೆ ಸಾಧಿಸಿಯೇ ಬಿಟ್ಟರು. ಹಾಗಾಗಿ ಸಾಧಕರೆನಿಸಲು ಪ್ರಯತ್ನ ,ಆತ್ಮವಿಶ್ವಾಸ ಮತ್ತು ನಂಬಿಕೆ ಮುಖ್ಯ ಎನ್ನುವುದು ಸತ್ಯವಾದ ಮಾತು. ಆದರೆ ಯಾವುದೇ
ಪ್ರಯತ್ನವನ್ನೂ ಮಾಡದೇ ಸುಮ್ಮನೆ ಯೋಚಿಸಿದರೆ ಫಲವಿಲ್ಲ ? ಅದೇ ಹೇಳುತ್ತಾರಲ್ಲ ; ಮನಸ್ಸು ಮಾಡಿದರೆ ಇರುವೆ ಅದೆಷ್ಟೋ ದೂರ ಸಾಗಬಹುದು;ಇಲ್ಲದಿದ್ದರೆ ಗರುಡನು ಕೂಡ ಒಂದು ಹೆಜ್ಜೆ ಮುಂದೆ ಸಾಗದಂತೆ. ಹಾಗಾಗಿ ನೀವೂ ಸಾಧಕರಾಗಬೇಕು ಬಂಗಾರದಂತಹ ಸಮಯವನ್ನು ಸಾಧನೆಗೆ ಮೀಸಲಿರಿಸಿ. ಅನಗತ್ಯವಾಗಿ ಸಮಯ ಹಾಳು ಮಾಡುವ ಪ್ರವೃತ್ತಿಯನ್ನು ಬಿಟ್ಟು ಬಿಡಿ. ಸಮಯ ಅದೊಂದು ವಿಸ್ಮಯವೆಂದು ಅದನ್ನು ಸರಿ ಬಳಸಿಕೊಳ್ಳಿರಿ.
ಸಂಕಲ್ಪ ಮಾಡಿರಿ ಅನುಷ್ಠಾನವಾಗಲಿ
ವಿದ್ಯಾರ್ಥಿಗಳೇ…
ಈಗ ನೀವೂ ನಿಮ್ಮದೇ ಒಂದು ಸಂಕಲ್ಪ ಕೈಗೊಳ್ಳಿ . ನಿಮ್ಮ ಒಂದು ಒಳ್ಳೆಯ ಯೋಚನೆಯು ಮತ್ತು ಕೈಗೊಳ್ಳುವ ನಿರ್ಧಾರ ನಿಮ್ಮನ್ನು ಒಬ್ಬ ಸಾಧಕನನ್ನಾಗಿ ಮಾಡಬಲ್ಲದು. ಆಗ ಎಲ್ಲರೂ ನಿಮ್ಮ ಸಾಧನೆಯ ಹಾದಿಯ ಗೆಲುವಿನ ಯಶೋಗಾಥೆಯನ್ನು ಆಗಾಗ ಹೇಳಿ ಖುಷಿ ಪಡುವರು. ನೀವೂ ಕೂಡ ಇದೇ ಶ್ರೇಷ್ಠತೆಯನ್ನು ಕಾಣಬೇಕೆಂಬುದೇ ನಮ್ಮೆಲ್ಲರ ಮನದಾಳದ ಶುಭಹಾರೈಕೆ. ಹಾಗಾಗಿ ನಿಮಗೊಂದು ಅವಕಾಶ ಕಾದಿದೆ. ಅದುವೇ ನಿಮ್ಮ ಕಲಿಕೆಯ ಜ್ಞಾನಕ್ಕೆ ಪೂರಕವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ.
ನೀವೂ ಜಾಣರು ಗೆಲುವು ನಿಮ್ಮದು
ನೀವು ಬರೆಯಲಿರುವ ಈ ಎಸ್ಸೆಸ್ಸೆಲ್ಸಿ ಪರೀಕ್ಷೆಯು ನಿಮ್ಮ ಸಾಧನೆಯ ಗೆಲುವಿಗಾಗಿ ಕಾದಿದೆ. ನಿಮ್ಮ ಗೆಲುವಿನ ಸಂಭ್ರಮದಲ್ಲಿ ನಿಮ್ಮ ಅಪ್ಪ ಅಮ್ಮ , ಬಂಧು ಬಳಗ ,ನಿಮ್ಮ ಮಿತ್ರರು,ಕಲಿಸಿದ ಗುರುಗಳು , ಶಾಲಾ ಆಡಳಿತ ಮಂಡಳಿ ರಾಜ್ಯದ ಸಮಸ್ತ ಗುರು ಬಳಗ ,ಶಿಕ್ಷಣ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ,ಪತ್ರಿಕಾ ಮಾಧ್ಯಮಗಳು, ಟಿ ವಿ ಮಾಧ್ಯಮಗಳು, ಊರ ವಿದ್ಯಾಭಿಮಾನಿಗಳು. ಅಷ್ಟೇಕೆ ? ಇಡೀ ರಾಜ್ಯದ ಜನತೆಯೇ ನಿಮ್ಮ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸುವರು. ಹಾಗಾಗಿ ಬರುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಬ್ಬದ ಸಿದ್ಧತೆಯು ಕೂಡ ಯಶಸ್ವಿಯಾಗಿ ನಡೆಯಲಿ.
ವಿದ್ಯಾರ್ಥಿ ಜೀವನದ ಮೊದಲ ಪಬ್ಲಿಕ್ ಪರೀಕ್ಷೆ ವಿದ್ಯಾರ್ಥಿಗಳೇ….
ನೀವೂ ಶಾಲೆಗೆ ಸೇರಿದಂದಿನಿಂದ ಇದುವರೆಗೆ ಹತ್ತನೆಯ ತರಗತಿಯವರೆಗೆ ನಡೆಸಿದ ಘಟಕ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುತ್ತಲೇ ಬಂದೀರಿ. ಆ ಎಲ್ಲಾ ಪರೀಕ್ಷೆಗಳಲ್ಲಿ ಪೂರ್ಣ ಅಂಕ ಪಡೆದಿರಬಹುದು ಇಲ್ಲದೇ ಇರಬಹುದು. ಆಗಿರುವ ತಪ್ಪು ಹುಡುಕಿ ಸರಿಪಡಿಸಿಕೊಳ್ಳಿರಿ. ಸರಿ ಈಗ ಈ ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ನಿಮ್ಮ ಅಣ್ಣನಂತೆಯೋ ತಂಗಿಯಂತೆಯೋ ಸ್ನೇಹಿತರಂತೆಯೋ ಈಗ ನೀವೂ ಪರೀಕ್ಷೆ ಬರೆಯುವ ಅವಕಾಶ ಪಡೆದುಕೊಂಡಿದ್ದೀರಿ. ವರ್ಷವಿಡೀ ಓದಿ ಇದೀಗ ಈ ಎಸ್ಸೆಸ್ಸೆಲ್ಸಿ ಅಂತಿಮ ಘಟ್ಟದಲ್ಲಿ ಇದ್ದು ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆ ಬರೆಯುವವರಿದ್ದೀರಿ. ಈ ಪರೀಕ್ಷೆಯನ್ನು ಬಹಳ ಉತ್ಸಾಹದಿಂದ ಬರೆದು ಅತ್ಯುತ್ತಮ ಅಂಕಗಳನ್ನು ಗಳಿಸಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕಲಿಕೆಗೆ ಶುಭ ವಿದಾಯ ಹೇಳುವ ಸಮಯ ಸನ್ನಿಹಿತವಾಗಿದೆ. ಮುಂದೆ ಉನ್ನತ ವ್ಯಾಸಂಗಕ್ಕಾಗಿ ಹೋಗುವವರಿದ್ದೀರಿ. ಅಲ್ಲದೇ ಈ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಜೀವನದಲ್ಲಿ ಪ್ರಥಮ ಬಾರಿಗೆ ಬರೆಯುತ್ತಿದ್ದೀರಿ. ಇದು ಹೇಗಾಬೇಕೆಂದರೆ ಗೊತ್ತಾ ಆಹಾ.. ಒಬ್ಬ ಬ್ಯಾಟ್ಸ್ ಮ್ಯಾನ್ ಮೊದಲಿಗೆ ಬಾಲ್ ಗೆ ಮೊದಲ ಸಿಕ್ಸರ್ ಹೊಡೆದಂತಹ ಅಪ್ರತಿಮ ಸಾಧನೆ ನಿಮ್ಮದಾಗಲಿ. ಎಲ್ಲರೂ ನಿಮ್ಮ ಸಾಧನೆಯನ್ನು ಕೊಂಡಾಡಲಿ. ಈ ಪರೀಕ್ಷೆಯು ನಿಮ್ಮ ಜೀವನದಲ್ಲೇ ಮೊದಲ ಬಾರಿ ಬರೆಯುವ ಹೆಗ್ಗಳಿಕೆಗೆ ಪಾತ್ರವಾಗಿದೆ .ಇದರಲ್ಲಿ ಗೆಲುವು ನಿಮ್ಮದೇ ಆಗಲಿದೆ.
ಅಂಕ ಗಳಿಸುವ ಜಾಣತನವಿರಲಿ..
ಈಗಾಗಲೇ ಪೂರ್ವ ಸಿದ್ದತಾ ಪರೀಕ್ಷೆಗಳನ್ನು ಬರೆದು ಆರು ವಿಷಯಗಳಲ್ಲಿ ಗಳಿಸಿದ ಅಂಕಗಳ ಬಗ್ಗೆ ತಿಳಿದಿದ್ದೀರಿ. ಅಂತೆಯೇ ಯಾವ ವಿಷಯಗಳಲ್ಲಿ ವಿಷಯಗಳಲ್ಲಿ ಎಷ್ಟು ಅಂಕಗಳು ಪಡೆದಿದ್ದೀರಿ. ಹಾಗಾದರೆ ಮುಂದೆ ಬರುವ ಕೊನೆಯ ಪರೀಕ್ಷೆಯಲ್ಲಿ ಇನ್ನಷ್ಟು ಅಂಕ ಪಡೆಯಲು ಇನ್ನೂ ಚೆನ್ನಾಗಿ ಓದಿ ಹೇಗೇ ತಯಾರಿ ನಡೆಸಿಕೊಳ್ಳಬೇಕು ಎಂದು ಒಳ್ಳೆಯ ತಯಾರಿ ಮಾಡಿಕೊಳ್ಳಿ. ಆ ಮೂಲಕ ಮಾರ್ಚ್ ನಲ್ಲಿ ನಡೆಯುವ ಅಂತಿಮ ಪರೀಕ್ಷೆಯಲ್ಲಿ ಆರು ವಿಷಯಗಳಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಗೆಲುವು ನಿಮ್ಮದಾಗಲಿ.
ಓದುವ ಪುಸ್ತಕಗಳು ಹೀಗಿರಲಿ
ನೀವೂ ಓದುವಾಗ ಎಲ್ಲಾ ಪಠ್ಯ ವಿಷಯಗಳಿಗೆ ಸಂಬಂಧಿಸಿದಂತೆ ಮುಖ್ಯವಾಗಿ ಪಠ್ಯಪುಸ್ತಕ ನೋಟ್ಸ್ ಪುಸ್ತಕ ಹಾಗೂ ಈಗಾಗಲೇ ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಹಾಗೆಯೇ ಮಾದರಿ ಪ್ರಶ್ನೆಗಳು, ಪ್ರಶ್ನೋತ್ತರ ಅಭ್ಯಾಸ ಪುಸ್ತಕಗಳು ನಿಮ್ಮಲಿರಲಿ. ಭಾಷಾ ವಿಷಯದಲ್ಲಿ ಪಾಠ, ಪದ್ಯ, ವ್ಯಾಕರಣ ವಿಚಾರಗಳು ಹಾಗೂ ಕೋರ್ ವಿಷಯದಲ್ಲಿ ಈಗಾಗಲೇ ತಮ್ಮ ಗುರುಗಳು ಸೂಚಿಸಿದಂತೆ ಪ್ರಶ್ನೆಗಳ ಉತ್ತರವನ್ನು ಬರೆಯಬೇಕಾದ ಚಿತ್ರಗಳು ಸರಿಯಾಗಿ ತಮ್ಮ ನೋಟ್ಸ್ ಗುರುತಿಸಿಕೊಂಡು ಉತ್ತರ ಬರೆಯಿರಿ.
ಮುದ್ದು ಮಕ್ಕಳೇ ಅಕ್ಷರ ಮುದ್ದಾಗಿರಲಿ
ಆದರೆ ಇಷ್ಟೆಲ್ಲಾ ಸಿದ್ಧತೆ ಮಾಡಿಕೊಂಡರೂ ನೀವೂ ನೆನಪಿನಲ್ಲಿಟ್ಟುಕೊಳ್ಳಲೇ ಬೇಕಾದ ಮುಖ್ಯ ಸಂಗತಿ ಆರು ಪಠ್ಯ ವಿಷಯಗಳನ್ನು ಓದಿ ಚೆನ್ನಾಗಿ ಸಿದ್ಧತೆ ಮಾಡಿ ನೀವೂ ನಿಮ್ಮ ಉತ್ತರಪತ್ರಿಕೆಯಲ್ಲಿ ಅಷ್ಟೇ ಚೆಂದ ಮಾಡಿ ಬರೆಯಲೇಬೇಕು.ನೀವೂ ನಿಗದಿಪಡಿಸಿದ ಸಮಯದೊಳಗೆ ಪರೀಕ್ಷೆ ಬರೆದು ಯಶಸ್ಸುಗೊಂಡರೂ ಬರೆದ ಅಕ್ಷರ ಅಂದವಾಗಿ ಬರೆದಿದ್ದರೆ ಅಷ್ಟೂ ಶ್ರಮಪಟ್ಟು ಓದಿದ ವಿಷಯ ಬರೆಯುವಲ್ಲಿ ಅಕ್ಷರ ಸರಿಯಾಗಿ ಎಂಬ ಖುಷಿ ಮತ್ತು ತುಂಬಾ ತೃಪ್ತಿ. ಸರಿಯಾಗಿ ಬರೆಯದೇ ತಪ್ಪು ಬರೆದರೆ ನಿಮ್ಮ ಸಾಮರ್ಥ್ಯದಲ್ಲಿ ಅಷ್ಟೂ ಬರೆದು ಹೆಚ್ಚು ಅಂಕಗಳನ್ನು ಪಡೆಯದೇ ವಂಚಿತರಾಗಬೇಡಿ.
ಪ್ರಶ್ನೆ ಪತ್ರಿಕೆಯನ್ನು ಗಮನಿಸಿಕೊಳ್ಳಿ
ಪ್ರಶ್ನೆಗೆ ಉತ್ತರ ಬೆರೆಯುವ ಮುನ್ನ ಪ್ರಶ್ನೆ ಪತ್ರಿಕೆಯಲ್ಲಿ ಕೊಟ್ಟಿರುವ ಸೂಚನೆಗಳನ್ನು ಓದಿ ಬರೆಯಲು ಮುಂದುವರಿಯಿರಿ. ಪ್ರಶ್ನೆ ಸಂಖ್ಯೆಗಳನ್ನು ಸರಿ ಹಾಕಿಕೊಳ್ಳಿ. ಯಾವ ಪ್ರಶ್ನೆಗೆ ಎಷ್ಟು ಅಂಕ ಇದೆ ಎಂದು ಖಾತ್ರಿಪಡಿಸಿಕೊಳ್ಳಿ. ಎಷ್ಟು ಬರೆದೆ ? ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿಕೊಳ್ಳಿರಿ. ಹಾಗೆಯೇ ಇನ್ನೂ ಎಷ್ಟು ಪ್ರಶ್ನೆಗಳು ಇವೆ ? ಅಂತೆಯೇ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗಿದೆಯೇ ಹಾಗೆಯೇ ಯಾವೂದಾದರೂ ಪ್ರಶ್ನೆಗಳಲ್ಲಿ ಆಯ್ಕೆ ಮಾಡಿ ಬರೆಯುವ ಅವಕಾಶ ನೀಡಿದ್ದಾರೆಯೇ ನೋಡಿ ಬರೆಯಿರಿ. ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸರಿಯಾಗಿದೆಯೇ ಎಂದು ಓದಿ ಮತ್ತೆ ಸರಿಯಾಗಿ ಉತ್ತರಿಸಿ.ಇನ್ನೊಂದು ಮುಖ್ಯ ಸಂಗತಿ ಅಕ್ಷರ ಅಂದವಾಗಲೂ ಯಾವುದೇ ಚಿತ್ತು ಆಗದಂತೆ ಎಚ್ಚರ ವಹಿಸಿ. ಇಡೀ ಉತ್ತರ ಪತ್ರಿಕೆಯಲ್ಲಿ ನಿಮ್ಮ ಬರೆವಣಿಗೆಯು ಮುದ್ದಾದ ಚೆಂದದ ಅಕ್ಷರವಿರಲಿ. ಇಡೀ ಉತ್ತರ ಪತ್ರಿಕೆಯ ಒಟ್ಟಂದಕ್ಕೆ ಕಾರಣವಾಗಲಿ.
ಸಮಯ ವಿಸ್ಮಯವೆಂಬ ಅರಿವಿರಲಿ..
ಮಕ್ಕಳೇ ಕೊಟ್ಟಿರುವ ಸಮಯದೊಳಗೆ ಪರೀಕ್ಷೆ ಬರೆದಾಗಲೇ ಮಾತ್ರ ಆ ಪರೀಕ್ಷೆಯನ್ನು ನೀವೂ ಜಾಣತನದಿಂದ ಉತ್ತರಿಸುವ ಸಾಮರ್ಥ್ಯ ಹೊಂದಿದ್ದೀರಿ ಎಂದು ಅರ್ಥ. ಹಾಗಾಗಿ ಸಮಯದೊಳಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯ ಇದೆ ಎನ್ನುವ ತೀರ್ಮಾನದಲ್ಲಿಯೇ ಪ್ರಶ್ನೆ ಪತ್ರಿಕೆ ರೂಪುಗೊಂಡಿದೆ. ಹಾಗಾಗಿ ಅನಗತ್ಯವಾಗಿ ಸಮಯವನ್ನು ವ್ಯರ್ಥ ಮಾಡದೇ ಸರಿಯಾಗಿ ಓದಿ ಆತ್ಮವಿಶ್ವಾಸದಿಂದ ನಾನು ಬರೆಯುವೆ ಎಂದು ನಿಮಗೆ ನೀವೂ ಹೇಳಿಕೊಂಡರೆ ನೀವೂ ಓದಿದೆಲ್ಲವೂ ನಿಮಗೆ ಸಲೀಸಾಗಿ ನೆನಪಾಗಿ ಉತ್ತರ ಬರೆಯಬಲ್ಲಿರಿ. ಮುಖ್ಯವಾಗಿ ವೇಳಾಪಟ್ಟಿ ಮಾಡಿ ಓದಲು ಮರೆಯದಿರಿ.ರಾಜ್ಯ ಪರೀಕ್ಷಾ ಮಂಡಳಿಯು ಸೂಚಿಸಿದೆ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿ ಪರೀಕ್ಷೆ ಬರೆಯಿರಿ.
ಪರೀಕ್ಷಾ ಹಬ್ಬ ಶುಭವ ತರಲಿ.
ಹಾಗಾಗಿ ಈ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಮ್ಮ ಮುಂದಿನ ವ್ಯಾಸಂಗಕ್ಕೆ ಹೆದ್ದಾರಿಯಾಗಿದೆ. ಆ ಮಾರ್ಗ ನಿಮಗೆ ರಾಜಮಾರ್ಗವಾಗಲಿ. ಫಲಿತಾಂಶ ಪಟ್ಟಿಯಲ್ಲಿ ನೀವೇ ಮೊದಲಿಗರಾಗಿಲಿ… ನಿಮ್ಮ ಮನೆಯವರು ತುಂಬಾ ಖುಷಿ ಪಡುವರು ಅಲ್ವೇ.. ಹಾಗೆಯೇ ನಾವೆಲ್ಲರೂ ಸಂಭ್ರಮಿಸೋಣ…
ಆಲ್ ದಿ ಬೆಸ್ಟ್
ಗಣೇಶ್ ಜಾಲ್ಸೂರು
ಶಿಕ್ಷಕರು ಶ್ರೀಮದ್ ಭುವನೇಂದ್ರ ಪ್ರೌಢಶಾಲೆ ಕಾರ್ಕಳ



















